ಬೆಂಗಳೂರು: ‘ಸಲಗ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವ ಮೂಲಕ ಸ್ಯಾಂಡಲ್ವುಡ್ಗೆ ನಿರ್ದೇಶಕರಾಗಿಯೂ ಪದಾರ್ಪಣೆ ಮಾಡಿರುವ ದುನಿಯಾ ವಿಜಯ್, ಈ ಸಲದ ತಮ್ಮ ಜನ್ಮದಿನವವನ್ನು ತಮ್ಮ ಚೊಚ್ಚಲ ನಿರ್ದೇಶನದ ‘ಸಲಗ’ ಚಿತ್ರಕ್ಕೆ ಅರ್ಪಣೆ ಮಾಡಿದ್ದಾರೆ.
ಜ. 20ಕ್ಕೆ 46 ವಸಂತಗಳನ್ನು ಪೂರೈಸಿರುವ ವಿಜಿ, ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಫ್ಯಾನ್ಸ್ ಸಂಭ್ರಮ ಹೆಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಜನ್ಮದಿನದ ಬಗ್ಗೆ ಮಾತನಾಡಿದ ಅವರು, ‘ಇದು ನನ್ನ ಬರ್ತ್ಡೇ ಅಲ್ಲ, ಸಲಗದ ಬರ್ತ್ಡೇ..’ ಎಂದು ಹೇಳಿಕೊಂಡಿದ್ದಾರೆ. ಸಿನಿಮಾ ಕುರಿತು ಮಾತನಾಡಿದ ಅವರು, ‘ಈ ಕಥೆಯೇ ನನ್ನನ್ನು ನಿರ್ದೇಶನ ಮಾಡುವಂತೆ ಪ್ರೇರೇಪಿಸಿತು. ಈ ಚಿತ್ರದ ನಿರ್ದೇಶನ ಮಾಡುವಲ್ಲಿ ನನಗೆ ನನ್ನ ಅನುಭವವೇ ರೋಲ್ ಮಾಡೆಲ್. ಇದು ನಾನು ನೋಡಿರುವ ಜಗತ್ತಾಗಿರುವುದರಿಂದ ನಾನೇ ನಿರ್ದೇಶನ ಮಾಡುವುದು ಸರಿ ಎನಿಸಿ ಮಾಡಿದೆ. ಇನ್ನು ನಿರ್ದೇಶನದ ಮೊದಲ ಸಿನಿಮಾ ಆಗಿರುವುದರಿಂದ ಒಂದಷ್ಟು ಟೆನ್ಷನ್ ಇದೆ’ ಎಂದರು ವಿಜಿ. ‘ನಮ್ಮ ಚಿತ್ರತಂಡದಲ್ಲಿ ಯಂಗ್ ಸ್ಪಿರಿಟ್ ಇದೆ. ತುಂಬ ಜನ ಕಿರಿಯವರಾದರೂ ಪಳಗಿದವರೇ ಕೆಲಸ ಮಾಡಿದ್ದಾರೆ’ ಎಂದು ತಮ್ಮ ತಂಡದ ಅಭಿ, ಶಿವಕುಮಾರ್, ಕಲ್ಲೇಶ್ ಮುಂತಾದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಚಿತ್ರರಂಗಕ್ಕೆ ಪ್ರವೇಶಿಸಬೇಕು ಎನ್ನುವವರು ಸರಿಯಾದ ತಯಾರಿಯೊಂದಿಗೆ ಬರಬೇಕು’ ಎಂಬ ಸಲಹೆಯನ್ನೂ ನೀಡಿದರು. ‘ಇದರಲ್ಲಿ ದುನಿಯಾ ಸೂರಿ ಅವರ ಪ್ರಭಾವ ಗೋಚರಿಸಿದರೂ ವಿಶೇಷವಲ್ಲ. ಏಕೆಂದರೆ ನಾವೆಲ್ಲ ಒಟ್ಟಾಗಿಯೇ ಹೊರಹೊಮ್ಮಿದವರು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಧ್ಯರಾತ್ರಿಯೇ ಟೀಸರ್ ರಿಲೀಸ್
ವಿಜಯ್ ಜನ್ಮದಿನದ ಪ್ರಯುಕ್ತ ಜ. 19ರ ಮಧ್ಯರಾತ್ರಿ ಸಲಗ ಸಿನಿಮಾದ ಟೀಸರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಬಿಡುಗಡೆ ಮಾಡಿಸಲಾಯಿತು. ಸಿನಿಮಾ ಪೂರ್ತಿ ಅಂಡರ್ವರ್ಲ್ಡ್ ಕುರಿತಾದ್ದು ಎಂಬುದನ್ನು ಟೀಸರ್ ಹೇಳುತ್ತಿದೆ. ‘ಅಂಡರ್ವರ್ಲ್ಡ್ ಕುರಿತಾದ ಸಿನಿಮಾಗಳಿಗೆ ಉಪೇಂದ್ರ ಅವರು ಗಾಡ್ಫಾದರ್. ಅದಕ್ಕೆ ಓಂಕಾರ ಹಾಕಿದವರೇ ಇವರು. ಯಾರೇ ಅಂಡರ್ವರ್ಲ್ಡ್ ಸಿನಿಮಾ ಮಾಡಬೇಕಿದ್ದರೂ ‘ಓಂ’ ಚಿತ್ರವನ್ನು ನೋಡಲೇಬೇಕು. ‘ಓಂ’, ‘ಎ’ ಸಿನಿಮಾಗಳ ಮೂಲಕ ನಾವೆಲ್ಲ ಸಿನಿಮಾರಂಗಕ್ಕೆ ಬರುವಂತೆ ಮಾಡಿದವರೇ ಉಪೇಂದ್ರ’ ಎಂದು ವಿಜಿ ಹೇಳಿಕೊಂಡರು. ಟೀಸರ್ಗೆ
ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ವೀಕ್ಷಣೆಗೆ ಒಳಗಾಗಿದೆ. ಕೆ.ಪಿ.ಶ್ರೀಕಾಂತ್ ನಿರ್ವಣದಲ್ಲಿ ಮೂಡಿಬಂದಿರುವ ಈ ಅದ್ದೂರಿ ಸಿನಿಮಾದಲ್ಲಿ ವಿಜಿಗೆ ಸಂಜನಾ ಆನಂದ್ ನಾಯಕಿ ಆಗಿ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡಾಲಿ ಧನಂಜಯ್ ಮಿಂಚಿದ್ದಾರೆ. ಫೆಬ್ರವರಿ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಚಿತ್ರತಂಡ.