ದಾಖಲೆಗಳ ಸರದಾರ ವಿರಾಟ್​ ಕೊಹ್ಲಿಯನ್ನು ಹಿಂದಿಕ್ಕಿದ ಹಿಟ್​ ಮ್ಯಾನ್​ ರೋಹಿತ್​!

ಲಖನೌ: ಹಿಂದಿನ ದಾಖಲೆಗಳನ್ನೆಲ್ಲ ಹಿಂದಿಕ್ಕಿ ಮುನ್ನುಗುತ್ತಿರುವ ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ಅವರನ್ನು ಹಿಟ್​​ ಮ್ಯಾನ್​ ರೋಹಿತ್​ ಶರ್ಮಾ ಹಿಂದಿಕ್ಕಿದ್ದಾರೆ.

ಎಲ್ಲ ಮಾದರಿ ಪಂದ್ಯಗಳಲ್ಲಿಯೂ ರೋಹಿತ್​, ವಿರಾಟರನ್ನು ಹಿಂದೆ ಹಾಕಿದರಾ… ಎಂದು ಹುಬ್ಬೇರಿಸಬೇಡಿ. ಬದಲಾಗಿ ಟಿ20 ಮಾದರಿ ಪಂದ್ಯದಲ್ಲಿ ಕೊಹ್ಲಿ ಅವರನ್ನು ಕೊಂಚ ಹಿಂದೆ ತಳ್ಳಿದ್ದಾರೆ ರೋಹಿತ್​. ಮಂಗಳವಾರ ಲಖನೌದಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 111 ರನ್​ ಬಾರಿಸುವ ಮೂಲಕ ರೋಹಿತ್​ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್​ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 86 ಪಂದ್ಯಗಳನ್ನು ಆಡಿರುವ ರೋಹಿತ್​ 2203 ರನ್​ ಗಳಿಸುವ ಮೂಲಕ 62 ಪಂದ್ಯಗಳಲ್ಲಿ 2102 ರನ್ ಗಳಿಸಿದ್ದ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ 71 ಪಂದ್ಯಗಳಿಂದ 2140 ರನ್​ ಗಳಿಸಿದ್ದ ನ್ಯೂಜಿಲೆಂಡ್​ನ ಬ್ರೆಂಡಮ್​ ಮೆಕಲಮ್​ ಹಾಗೂ 108 ಪಂದ್ಯಗಳಿಂದ 2190 ರನ್​ ಗಳಿಸಿದ್ದ ಪಾಕಿಸ್ತಾನದ ಶೋಹೆಬ್​ ಮಲ್ಲಿಕ್​ರನ್ನು ಹಿಂದೆ ತಳ್ಳಿರುವ ರೋಹಿತ್​ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸದ್ಯ ಪಟ್ಟಿಯಲ್ಲಿ ನ್ಯೂಜಿಲೆಂಡ್​ನ ಮಾರ್ಟಿನ್​ ಗುಪ್ಟಿಲ್​ 75 ಪಂದ್ಯಗಳಲ್ಲಿ 2271 ರನ್​ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಟಿ20 ಪಂದ್ಯದಲ್ಲಿ ನಾಲ್ಕು ಶತಕ ಬಾರಿಸಿದ ಭಾರತದ ಏಕೈಕ ಆಟಗಾರನೆಂಬ ಹೆಗ್ಗಳಿಕೆಯನ್ನು ರೋಹಿತ್​ ಹೊಂದಿದ್ದಾರೆ.(ಏಜೆನ್ಸೀಸ್​)