ವಿಶ್ವಕಪ್​ ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದಿದ್ದಕ್ಕೆ ಭಾವನಾತ್ಮಕ ಸಂದೇಶ ರವಾನಿಸಿದ ರೋಹಿತ್​ ಶರ್ಮ

ನವದೆಹಲಿ: ವಿಶ್ವಕಪ್​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದ ಟೀಂ ಇಂಡಿಯಾ ಎಲ್ಲರ ಪಾಲಿಗೆ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ನ್ಯೂಜಿಲೆಂಡ್​ ವಿರುದ್ಧ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಸೋತಿದ್ದು, ಅಸಂಖ್ಯಾತ ಭಾರತೀಯರ ಆಸೆ ನುಚ್ಚು ನೂರಾಗಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿ ನಿರ್ಣಾಯಕ ಪಂದ್ಯದಲ್ಲೇ ಮುಗ್ಗರಿಸಿದ ಉಪನಾಯಕ ರೋಹಿತ್​ ಶರ್ಮ ವಿಶ್ವಕಪ್​ ಟೂರ್ನಿಯಿಂದ ತಂಡ ಹೊರಬಿದ್ದಿದ್ದಕ್ಕೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ತಮ್ಮ ಟ್ವೀಟ್​ ಮೂಲಕ ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ, ಒಂದು ತಂಡವನ್ನಾಗಿ ನಾವು ಫೈನಲ್​ ತಲುಪುವಲ್ಲಿ ನಾವು ವಿಫಲರಾಗಿದ್ದೇವೆ. ಮೂವತ್ತು ನಿಮಿಷದ ಕಳಪೆ ಆಟ ವಿಶ್ವಕಪ್​ ಗೆಲುವ ನಮ್ಮ ಅವಕಾಶವನ್ನು ಕಸಿದುಕೊಂಡಿತು. ನನ್ನ ಹೃದಯ ತುಂಬಾ ಭಾರವಾಗಿದ್ದು, ನಿಮಗೂ ಕೂಡ ಹಾಗೇ ಆಗಿದೆ ಎಂದು ನನಗೆ ತಿಳಿದಿದೆ. ತವರಿನಿಂದ ನಮಗೆ ಸಿಕ್ಕ ಬೆಂಬಲ ಅದ್ಭುತವಾಗಿತ್ತು. ನಾವು ಯುಕೆಯಲ್ಲಿ ಆಡಿದ ಪಂದ್ಯಗಳಲೆಲ್ಲಾ ನಮ್ಮ ಬೆಂಬಲಿಸಿದವರಿಗೆ ಧನ್ಯವಾದಗಳು ಎಂದು ರೋಹಿತ್​ ತಿಳಿಸಿದ್ದಾರೆ.

ಮಳೆಯ ಕಾರಣದಿಂದ ಮಂಗಳವಾರ ಅರ್ಧಕ್ಕೆ ಸೀಮಿತವಾಗಿದ್ದ ಪಂದ್ಯವು ಮೀಸಲು ದಿನವಾದ ಬುಧವಾರ ಆರಂಭವಾಗಿ ಇನಿಂಗ್ಸ್​ನ ಕೊನೇ 23 ಎಸೆತಗಳನ್ನು ಎದುರಿಸಿದ ನ್ಯೂಜಿಲೆಂಡ್, 8 ವಿಕೆಟ್​ಗೆ 239 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಆಲ್ರೌಂಡರ್ ರವೀಂದ್ರ ಜಡೇಜಾರ (77 ರನ್ 59 ಎಸೆತ, 4 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್​ ಹಾಗೂ ಅನುಭವಿ ಎಂಎಸ್ ಧೋನಿ (50 ರನ್, 72 ಎಸೆತ, 1 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಹೊರತಾಗಿಯೂ 49.3 ಓವರ್​ಗಳಲ್ಲಿ 221 ರನ್​ಗೆ ಆಲೌಟ್ ಆಗಿ ವಿಶ್ವಕಪ್​ನಿಂದ ನಿರ್ಗಮಿಸಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *