ಏಷ್ಯನ್​ ಗೇಮ್ಸ್: ಭಾರತಕ್ಕೆ ಟೆನಿಸ್​ನಲ್ಲಿ ಚಿನ್ನ, ಶೂಟಿಂಗ್​ನಲ್ಲಿ ಕಂಚು

ಜಕಾರ್ತ: ಏಷ್ಯನ್​ ಗೇಮ್ಸ್​ ಕೂಟದ 6ನೇ ದಿನವೂ ಭಾರತೀಯ ಸ್ಪರ್ಧಿಗಳು ಪದಕ ಬೇಟೆಯನ್ನು ಮುಂದುವರಿಸಿದ್ದು, ಟೆನಿಸ್​ನ ಪುರುಷರ ಡಬಲ್ಸ್​ ವಿಭಾಗದಲ್ಲಿ ಭಾರತದ ರೋಹನ್​ ಬೋಪಣ್ಣ ಮತ್ತು ದಿವಿಜ್​ ಶರಣ್​ ಜೋಡಿ ಚಿನ್ನದ ಪದಕ ಜಯಿಸಿದರೆ, ಶೂಟಿಂಗ್​ನಲ್ಲಿ ಹೀನಾ ಸಿಧು ಕಂಚಿನ ಪದಕ ಜಯಿಸಿದ್ದಾರೆ.

ಬೋಪಣ್ಣ-ದಿವಿಜ್​ ಜೋಡಿ ಪುರುಷರ ಡಬಲ್ಸ್​ ಫೈನಲ್​ನಲ್ಲಿ ಕಜಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ / ಡೆನಿಸ್ ಯೆವ್ಸೇವ್ ಜೋಡಿ ವಿರುದ್ಧ 6-3, 6-4 ನೇರ ಸೆಟ್​ಗಳ ಅಂತರದಿಂದ ಜಯಗಳಿಸಿದರು.

ಮಹಿಳೆಯರ 10 ಮೀಟರ್​ ಏರ್​ ಪಿಸ್ತೂಲ್​ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ಹೀನಾ ಸಿಧು ಕಂಚಿನ ಪದಕ ಜಯಿಸಿದರು. ಹೀನಾ ಫೈನಲ್​ನಲ್ಲಿ ಒಟ್ಟು 219.3 ಅಂಕ ಕಲೆ ಹಾಕಿ ಕಂಚಿನ ಪದಕ ಜಯಿಸಿದರೆ, ಚೀನಾದ ವಾಂಗ್​ ಕ್ವಾನ್​ 240.3 ಅಂಕ ಕಲೆಹಾಕಿ ಚಿನ್ನದ ಪದಕ ಜಯಿಸಿದರು. ಕೊರಿಯಾದ ಕಿಮ್​ ಮುನ್​ಜಿಂಗ್​ 237.6 ಅಂಕ ಕಲೆಹಾಕಿ ಬೆಳ್ಳಿ ಪದಕ ಜಯಿಸಿದರು.