Friday, 16th November 2018  

Vijayavani

Breaking News

ಸೆಮಿಫೈನಲ್​ಗೆ ಜೋಕೊವಿಕ್, ಫೆಡರರ್​ಗೆ ಶಾಕ್

Thursday, 12.07.2018, 3:03 AM       No Comments

ಲಂಡನ್: ಹಾಲಿ ಚಾಂಪಿಯನ್ ಹಾಗೂ ದಾಖಲೆಯ 9ನೇ ವಿಂಬಲ್ಡನ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಸ್ವಿಜರ್ಲೆಂಡ್​ನ ದಿಗ್ಗಜ ಟೆನಿಸ್ ಆಟಗಾರ 36 ವರ್ಷದ ರೋಜರ್ ಫೆಡರರ್ ಕ್ವಾರ್ಟರ್​ಫೈನಲ್​ನಲ್ಲಿ ಆಘಾತ ಎದುರಿಸಿದ್ದಾರೆ.

ಹಾಲಿ ಯುಎಸ್ ಓಪನ್ ರನ್ನರ್​ಅಪ್ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್​ಸನ್ ವಿರುದ್ಧ ಮ್ಯಾರಥಾನ್ ಪಂದ್ಯದಲ್ಲಿ ಫೆಡರರ್ ಮುಗ್ಗರಿಸಿದರು. ಇನ್ನೊಂದೆಡೆ ಎರಡು ವರ್ಷಗಳ ಬಳಿಕ ಗ್ರಾಂಡ್ ಸ್ಲಾಂ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಸೆರ್ಬಿಯಾದ ನೊವಾಕ್ ಜೋಕೊವಿಕ್ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಅಗ್ರಶ್ರೇಯಾಂಕದ ರೋಜರ್ ಫೆಡರರ್ ಎರಡು ಸೆಟ್​ಗಳ ಮುನ್ನಡೆಯ ಹೊರತಾಗಿಯೂ 6-2, 7-6, 5-7, 4-6, 11-13 ರಿಂದ ಕೆವಿನ್ ಆಂಡರ್​ಸನ್​ಗೆ ಸೋತರು. ಒಟ್ಟು 4 ಗಂಟೆ 14 ನಿಮಿಷದ ಪಂದ್ಯದಲ್ಲಿ ಫೆಡರರ್ ಸೋಲು ಕಂಡರು.

2016ರ ಫ್ರೆಂಚ್ ಓಪನ್ ಚಾಂಪಿಯನ್ ಜೋಕೋ 2ಗಂಟೆ, 35 ನಿಮಿಷಗಳ ಪ್ರಬಲ ಹೋರಾಟದಲ್ಲಿ ಜಪಾನ್ ಅನುಭವಿ ಕಿ ನಿಶಿಕೋರಿಯನ್ನು ಸೋಲಿಸಿದರು.ಮೊದಲ ಸೆಟ್​ನಲ್ಲಿ ಹಿನ್ನಡೆ ಕಂಡಿದ್ದ ಕಿ ನಿಶಿಕೋರಿ 2ನೇ ಸೆಟ್​ನಲ್ಲಿ ಲಯಕ್ಕೆ ಮರಳಿದರು. ಆದರೆ ನಂತರದ ಎರಡೂ ಸೆಟ್​ನಲ್ಲಿ ಸ್ಪಷ್ಟ ಮೇಲುಗೈ ಕಂಡ ಜೋಕೋ ಸಿಡಿಸಿದ ಒಟ್ಟು 39 ವಿನ್ನರ್ಸ್ ನೆರವಿನಿಂದ 6-3, 3-6, 6-2, 6-2ರಿಂದ ವಿಶ್ವ ನಂ.28 ನಿಶಿಕೋರಿಗೆ ಸೋಲುಣಿಸಿ ಒಟ್ಟಾರೆ 8ನೇ ಬಾರಿ ವಿಂಬಲ್ಡನ್ ಸೆಮೀಸ್​ಗೆ ಲಗ್ಗೆ ಇಟ್ಟರು. ಮೂರು ಬಾರಿಯ ಚಾಂಪಿಯನ್ ಜೋಕೊವಿಕ್ 2015ರಲ್ಲಿ ಕೊನೇ ಬಾರಿ ಚಾಂಪಿಯನ್ ಆದ ಬಳಿಕ ಕಳೆದೆರಡೂ ಆವೃತ್ತಿಗಳಲ್ಲಿ 3ನೇ ಸುತ್ತು ಹಾಗೂ ಕ್ವಾರ್ಟರ್ ಫೈನಲ್​ನಲ್ಲಿ ನಿರ್ಗಮನ ಕಂಡಿದ್ದರು. 2016ರ ಯುಎಸ್ ಓಪನ್​ನಲ್ಲಿ ರನ್ನರ್ ಅಪ್ ಆಗಿದ್ದು ಜೋಕೋರ ಇತ್ತೀಚೆಗಿನ ಅತ್ಯುತ್ತಮ ಗ್ರಾಂಡ್​ಸ್ಲಾಂ ನಿರ್ವಹಣೆಯಾಗಿತ್ತು.

ಭಾರತದ ಸವಾಲು ಅಂತ್ಯ: ದಿವಿಜ್ ಶರಣ್ ಜೋಡಿ ಪುರುಷರ ಡಬಲ್ಸ್ ಕ್ವಾರ್ಟರ್​ಫೈನಲ್​ನಲ್ಲಿ ಸೋಲು ಕಾಣುವುದರೊಂದಿಗೆ ಕೂಟದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ದಿವಿಜ್ ಮತ್ತು ನ್ಯೂಜಿಲೆಂಡ್​ನ ಆರ್ಟೆಮ್ ಸಿಟಾಕ್ ಜೋಡಿ 6-7, 6-7, 7-6, 4-6ರಿಂದ ಬ್ರಿಯಾನ್-ಸಾಕ್ ಜೋಡಿಗೆ ಶರಣಾಯಿತು.

ಇಂದು ಮಹಿಳೆಯರ ಸೆಮಿಫೈನಲ್ಸ್

ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯಗಳು ಗುರುವಾರ ನಡೆಯಲಿದೆ. ಮಾಜಿ ವಿಶ್ವ ನಂ.1 ಆಟಗಾರ್ತಿಯರಾದ ಜರ್ಮನಿಯ ಏಂಜಲಿಕ್ ಕೆರ್ಬರ್ ಹಾಗೂ ಸೆರೇನಾ ವಿಲಿಯಮ್್ಸ ಕಣದಲ್ಲಿದ್ದಾರೆ. ಕಳೆದ ವರ್ಷ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಟೆನಿಸ್ ಲೋಕದ ಗಮನಸೆಳೆದಿದ್ದ ಲಾಟ್ವಿಯಾದ ಜೆಲೆನಾ ಒಸ್ತಾಪೆಂಕೊ ಹಾಗೂ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಸೆಮಿಫೈನಲ್​ಗೇರಿರುವ ಜರ್ಮನಿಯ ಜೂಲಿಯಾ ಜಾರ್ಜಸ್ ಕೂಡ ಫೈನಲ್ ರೇಸ್​ನಲ್ಲಿದ್ದಾರೆ. ಕೆರ್ಬರ್ ಹಾಗೂ ಒಸ್ತಾಪೆಂಕೊ ಮುಖಾಮುಖಿಯಾಗಲಿದ್ದರೆ, 11ನೇ ಬಾರಿಗೆ ವಿಂಬಲ್ಡನ್​ನ ಉಪಾಂತ್ಯಕ್ಕೇರಿರುವ ಸೆರೇನಾ ವಿಲಿಯಮ್್ಸ, ಜೂಲಿಯಾರನ್ನು ಎದುರಿಸಲಿದ್ದಾರೆ.

Leave a Reply

Your email address will not be published. Required fields are marked *

Back To Top