More

  ಕ್ವಾರ್ಟರ್​ಫೈನಲ್​ಗೇರಿದ ಜೋಕೊವಿಕ್, ಫೆಡರರ್

  ಮೆಲ್ಬೋರ್ನ್: ಏಳು ಬಾರಿಯ ಚಾಂಪಿಯನ್ ಸೆರ್ಬಿಯಾದ ನೊವಾಕ್ ಜೋಕೊವಿಕ್ ಹಾಗೂ ಆರು ಬಾರಿಯ ಚಾಂಪಿಯನ್ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್​ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ದೈತ್ಯ ಸಂಹಾರಿ ಕೊಕೊ ಗೌಫ್​ರ ಕನಸಿನ ಓಟಕ್ಕೆ ಅವರದೇ ದೇಶದ ಯುವ ಆಟಗಾರ್ತಿ 21 ವರ್ಷದ ಸೋಫಿಯಾ ಕೆನಿನ್ ಕೊನೆ ಹಾಡಿದ್ದಾರೆ.

  ಮೆಲ್ಬೋರ್ನ್ ಪಾರ್ಕ್​ನ ರಾಡ್ ಲೆವರ್ ಅರೇನಾದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಫೆಡರರ್ ನಿಧಾನಗತಿಯ ಆರಂಭ ಕಂಡು ಮೊದಲ ಸೆಟ್​ನಲ್ಲಿ ಸೋಲು ಕಂಡರೂ ನಂತರದ ಮೂರು ಸೆಟ್​ಗಳಲ್ಲಿ ತಿರುಗೇಟು ನೀಡುವ ಮೂಲಕ 4-6, 6-1, 6-2, 6-2 ರಿಂದ ಹಂಗೆರಿಯ ಆಟಗಾರ ಮಾರ್ಟನ್ ಫುಸ್ಕೋವಿಕ್ಸ್​ರನ್ನು ಸೋಲಿಸಿದರು. ಆ ಮೂಲಕ 15ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್​ನಲ್ಲಿ ಕ್ವಾರ್ಟರ್​ಫೈನಲ್ ಸಾಧನೆ ಮಾಡಿದರು.

  ಇನ್ನೊಂದೆಡೆ ಯಾವುದೇ ಕಠಿಣ ಎದುರಾಳಿಯ ಸವಾಲು ಪಡೆಯದೇ ನಿರಾಳವಾಗಿ ಮುನ್ನಡೆಯುತ್ತಿರುವ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ 6-3, 6-4, 6-4 ರಿಂದ ಅರ್ಜೆಂಟೀನಾದ ಡಿಗೋ ಶ್ವರ್ಟ್ಜ್​ಮನ್​ರನ್ನು ಸೋಲಿಸಿದರು. 2 ಗಂಟೆ 6 ನಿಮಿಷದ ಹೋರಾಟದಲ್ಲಿ ಗೆಲುವು ಕಂಡು 11ನೇ ಬಾರಿಗೆ ಕ್ವಾರ್ಟರ್​ಫೈನಲ್ ಸಾಧನೆ ಮಾಡಿದರು.

  ದಿನದ ಇತರ ಪಂದ್ಯಗಳಲ್ಲಿ 32ನೇ ಶ್ರೇಯಾಂಕದ ಆಟಗಾರ ಕೆನಡದ ಮಿಲೋಸ್ ರಾವೋನಿಕ್ 6-4, 6-3, 7-5 ರಿಂದ ಕ್ರೋಷಿಯಾದ ಮರಿನ್ ಸಿಲಿಕ್​ರನ್ನು ಸೋಲಿಸಿದರೆ, ಅಮೆರಿಕದ ಟೆನಿಸ್ ಸ್ಯಾಂಡ್​ಗ್ರೀನ್ ಮತ್ತೊಂದು ಅದ್ಭುತ ನಿರ್ವಹಣೆ ತೋರುವ ಮೂಲಕ 12ನೇ ಶ್ರೇಯಾಂಕದ ಆಟಗಾರ ಇಟಲಿಯ ಫ್ಯಾಬಿಯೋ ಫೊಗ್ನಿನಿಯನ್ನು 7-6 (7), 7-5, 6-7 (7), 6-4 ರಿಂದ ಸೋಲಿಸಿದರು. ಕ್ವಾರ್ಟರ್​ಫೈನಲ್​ನಲ್ಲಿ ಫೆಡರರ್-ಸ್ಯಾಂಡ್​ಗ್ರೀನ್ ಮತ್ತು ಜೋಕೋ-ರಾವೋನಿಕ್ ಮುಖಾಮುಖಿಯಾಗಲಿದ್ದಾರೆ. -ಏಜೆನ್ಸೀಸ್

  ಗೌಫ್ ಓಟಕ್ಕೆ ಕೆನಿನ್ ಅಡ್ಡಿ

  ವೀನಸ್ ವಿಲಿಯಮ್ಸ್ ಹಾಗೂ ಹಾಲಿ ಚಾಂಪಿಯನ್ ನವೋಮಿ ಒಸಾಕರನ್ನು ಹೊರಗಟ್ಟುವ ಮೂಲಕ ಅದ್ಭುತ ಲಯದಲ್ಲಿದ್ದ ಅಮೆರಿಕದ 15 ವರ್ಷದ ಶಾಲಾ ಬಾಲಕಿ ಕೊಕೊ ಗೌಫ್​ರ ಕನಸಿನ ಓಟವನ್ನು ಸ್ವದೇಶದ ಆಟಗಾರ್ತಿ ಸೋಫಿಯಾ ಕೆನಿನ್ ಕೊನೆ ಮಾಡಿದರು. 2 ಗಂಟೆ 9 ನಿಮಿಷದ ಸುದೀರ್ಘ ಹೋರಾಟದಲ್ಲಿ ಮೊದಲ ಸೆಟ್​ನಲ್ಲಿ ಸೋಲು ಕಂಡಿದ್ದ ಕೆನಿನ್, 6-7(7), 6-3, 6-0ಯಿಂದ ಕೊಕೊ ಗೌಫ್​ರನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಕ್ವಾರ್ಟರ್​ಫೈನಲ್ ಸಾಧನೆ ಮಾಡಿದರು.

  ಎಂಟರ ಘಟ್ಟಕ್ಕೇರಿದ ಬಾರ್ಟಿ, ಆಸ್ಟ್ರೇಲಿಯಾ ಆಸೆ ಜೀವಂತ

  42 ವರ್ಷಗಳ ಬಳಿಕ ಆಸ್ಟ್ರೇಲಿಯನ್ ಓಪನ್ ಗೆದ್ದ ಆಸೀಸ್​ನ ಮೊದಲ ಆಟಗಾರ್ತಿ ಎನಿಸಿಕೊಳ್ಳುವ ಇರಾದೆಯಲ್ಲಿರುವ ವಿಶ್ವ ನಂ.1 ಆಶ್ಲೆಗ್ ಬಾರ್ಟಿ 6-3, 1-6, 6-4 ರಿಂದ 18ನೇ ಶ್ರೇಯಾಂಕದ ಆಟಗಾರ್ತಿ, ಅಮೆರಿಕದ ಅಲಿಸನ್ ರಿಸ್ಕೆಯನ್ನು ಸೋಲಿಸಿದರು. ಕಳೆದ ವಿಂಬಲ್ಡನ್​ನಲ್ಲಿ ಇದೇ ಹಂತದಲ್ಲಿ ರಿಸ್ಕೆಗೆ ಶರಣಾಗಿ ನಿರಾಸೆ ಅನುಭವಿಸಿದ್ದ ಬಾರ್ಟಿ, ಈ ಬಾರಿಯೂ ಅದೇ ರೀತಿಯ ಫಲಿತಾಂಶವನ್ನು ಎದುರಿಸುವ ಹಾದಿಯಲ್ಲಿದ್ದರು. ಆದರೆ, ಕೊನೇ ಸೆಟ್​ನಲ್ಲಿ ಎಚ್ಚರಿಕೆಯ ಆಟವಾಡಿ ಗೆಲುವು ಒಲಿಸಿಕೊಂಡರು. ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ, ಗ್ರೀಸ್​ನ ಮರಿಯಾ ಸಕ್ಕರಿಯನ್ನು 6-7 (7), 6-3, 6-2 ರಿಂದ ಮಣಿಸಿದರು. ಅಂತಿಮ ಎಂಟರ ಘಟ್ಟದಲ್ಲಿ ಕ್ವಿಟೋವಾ ಹಾಗೂ ಬಾರ್ಟಿ ಪರಸ್ಪರ ಎದುರಾಗಲಿದ್ದಾರೆ.

  ಪೇಸ್, ಬೋಪಣ್ಣಗೆ ಜಯ

  ವೃತ್ತಿಜೀವನದ ಕೊನೆಯ ಟೆನಿಸ್ ಋತುವಿನಲ್ಲಿ ಕಣಕ್ಕಿಳಿದಿರುವ ಭಾರತದ ಅನುಭವಿ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ಲಾಟ್ವಿಯಾದ ಜೆಲೆನಾ ಒಸ್ತಾಪೆಂಕೊ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ 2ನೇ ಸುತ್ತಿಗೇರಿದ್ದರೆ, ರೋಹನ್ ಬೋಪಣ್ಣ ಹಾಗೂ ಉಕ್ರೇನ್​ನ ನಾಡಿಯಾ ಕಿಚೆನಾಕ್ ಜೋಡಿ ಕ್ವಾರ್ಟರ್​ಫೈನಲ್ ಸಾಧನೆ ಮಾಡಿದೆ. 2017ರ ಫ್ರೆಂಚ್ ಓಪನ್ ಸಿಂಗಲ್ಸ್ ಚಾಂಪಿಯನ್ ಜತೆಗೂಡಿ ಆಡುತ್ತಿರುವ ಪೇಸ್ 6-7, 6-3, 10-6 ರಿಂದ ಸ್ಥಳೀಯ ಜೋಡಿ ಸ್ಟ್ರೋಮ್ ಸ್ಯಾಂಡರ್ಸ್ ಹಾಗೂ ಮಾರ್ಕ್ ಪೋಲ್ಮಾನ್ಸ್ ಜೋಡಿಯನ್ನು ಮಣಿಸಿತು. ಮುಂದಿನ ಸುತ್ತಿನಲ್ಲಿ ಈ ಜೋಡಿ ಅಮೆರಿಕದ ಬೆಥಮಿ ಮ್ಯಾಟೆಕ್ ಸ್ಯಾಂಡ್ಸ್ ಹಾಗೂ ಬ್ರಿಟನ್​ನ ಜಿಮ್ಮಿ ಮರ್ರೆ ಜೋಡಿಯನ್ನು ಎದುರಿಸಲಿದೆ. ಬೋಪಣ್ಣ-ಕಿಚೆನಾಕ್ ಜೋಡಿ 6-4, 7-6 (4) ರಿಂದ ನಿಕೋಲ್ ಮೆಲಿಚೆರ್-ಬ್ರುನೋ ಸೋರೆಸ್​ರನ್ನು ಮಣಿಸಿತು.

  ವಾಂಗ್​ಗೆ ಸೋಲುಣಿಸಿದ ಜಬೂರ್

  ಟುನೇಷಿಯಾದ ಓನ್ಸ್ ಜಬೂರ್, 2004ರ ಬಳಿಕ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಕ್ವಾರ್ಟರ್​ಫೈನಲ್ ಸಾಧನೆ ಮಾಡಿದ ಮೊದಲ ಅರಬ್ (ಪುರುಷ ಹಾಗೂ ಮಹಿಳಾ ವಿಭಾಗ) ಟೆನಿಸ್ ತಾರೆ ಎನಿಸಿಕೊಂಡರು. 16ರ ಘಟ್ಟದ ಪಂದ್ಯದಲ್ಲಿ 25 ವರ್ಷದ ಜಬೂರ್, ಸೆರೇನಾ ವಿಲಿಯಮ್ಸ್

  ಗೆ ಆಘಾತ ನೀಡಿದ ಚೀನಾ ಆಟಗಾರ್ತಿ 28ನೇ ಶ್ರೇಯಾಂಕದ ಕ್ವಿಯಾಂಗ್ ವಾಂಗ್​ರನ್ನು 7-6 (4), 6-1 ರಿಂದ ಸೋಲಿಸಿದರು. 16 ವರ್ಷಗಳ ಹಿಂದೆ ಮೊರಾಕ್ಕೊದ ಹಿಚಾಮ್ ಅರಾಜಿ ಆಸ್ಟ್ರೇಲಿಯನ್ ಓಪನ್​ನ ಕ್ವಾರ್ಟರ್​ಫೈನಲ್ ಸಾಧನೆ ಮಾಡಿದ ಯಾವೊಬ್ಬ ಅರಬ್ ಟೆನಿಸ್ ತಾರೆ ಕೂಡ ಗ್ರಾಂಡ್ ಸ್ಲಾಂನಲ್ಲಿ ಈ ಘಟ್ಟಕ್ಕೇರಿರಲಿಲ್ಲ. ಈ ಸಾಧನೆ ಮಾಡಿದ ಮೊದಲ ಅರಬ್ ತಾರೆ ಮಾತ್ರವಲ್ಲ, ಮೊದಲ ಉತ್ತರ ಆಫ್ರಿಕಾದ ಟೆನಿಸ್ ತಾರೆ ಕೂಡ ಆಗಿದ್ದಾರೆ. ಮುಂದಿನ ಪಂದ್ಯದಲ್ಲಿ ಜಬೂರ್, ಸೋಫಿಯಾ ಕೆನಿನ್​ರನ್ನು ಎದುರಿಸಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts