More

  ಗಗನ ಸಾಧಕ ರೊದ್ದಂ ನರಸಿಂಹ: ನುಡಿ ನಮನ

  ವೈಮಾನಿಕ ಕ್ಷೇತ್ರದ ಅಂತಾರಾಷ್ಟ್ರೀಯ ಮಟ್ಟದ ಅಗ್ರಗಣ್ಯ ವಿಜ್ಞಾನಿಗಳ ಪೈಕಿ ಅಪ್ಪಟ ಕನ್ನಡಿಗ ಪ್ರೊ. ರೊದ್ದಂ ನರಸಿಂಹ ಪ್ರಮುಖರು. ಇವರ ಎಷ್ಟೋ ಸಂಶೋಧನೆಗಳಿಂದಾಗಿ ವಿಮಾನದಲ್ಲಿ ಸಂಚರಿಸುವ ಪ್ರಯಾಣಿಕರು ನಿರ್ಭೀತಿಯಿಂದ, ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗಿದೆ ಎಂದರೆ ನಂಬುತ್ತೀರಾ? ಹೌದು, ಯುದ್ಧವಿಮಾನಗಳು ಮತ್ತು ನಾಗರಿಕಯಾನದ ವಿಮಾನಗಳಲ್ಲಿ ಆರಂಭಿಕ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರೊದ್ದಂ ತಮ್ಮ ಸಂಶೋಧನೆಯನ್ನು ಮುಖ್ಯವಾಗಿ, ಏರೋಸ್ಪೇಸ್ ಮತ್ತು ಅಟ್ಮಾಸ್ಪೆರಿಕ್ ಫ್ಲೂಯಿಡ್ ಡೈನಮಿಕ್ಸ್​ನತ್ತ (ದ್ರವ ಕ್ರಿಯಾತ್ಮಕ) ಕೇಂದ್ರೀಕರಿಸಿದ್ದರು. ಲ್ಯಾಮಿನಾರ್ ಮತ್ತು ಟರ್ಬ್ಯುಲೆಂಟ್ ಫ್ಲೋನಲ್ಲಿ ಪರಿವರ್ತನೆ (ಯಾವುದೇ ದಿಕ್ಕಿನಲ್ಲಿ ಸಲೀಸಾಗಿ ಚಲಿಸಲು ಸಾಧ್ಯವಾಗುವಿಕೆ), ಆಘಾತ ಅಲೆಗಳ ರಚನೆ, ಪೂರ್ಣ ಅಭಿವೃದ್ಧಿಗೊಂಡ ಟರ್ಬ್ಯುಲೆಂಟ್ ಫ್ಲೋನ ವಿವಿಧ ಲಕ್ಷಣಗಳು (ಉದಾ: ಅವುಗಳ ಮೆಮೊರಿ, ಅಂಚಿನ ಪದರಗಳಲ್ಲಿ ಸಿಡಿತದ ವಿದ್ಯಮಾನ), ಮೋಡಗಳ ಫ್ಲೂಯಿಡ್ ಡೈನಮಿಕ್, ಭೂ ಮೇಲ್ಪದರದ ತಾಪಮಾನದ ವಿತರಣೆ, ಮೋಡಗಳ ಚಲನೆ, ಜಾಗತಿಕ ಹವಾಮಾನ ಬದಲಾವಣೆ ಮತ್ತು ಭಾರತೀಯ ಮುಂಗಾರುವಿನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವಿಸõತ ಅಧ್ಯಯನ ನಡೆಸಿ, ಅವುಗಳಿಗೆ ಪರಿಹಾರ ಕಂಡು ಹಿಡಿದಿದ್ದಾರೆ. ಭಾರತವೇ ಹೆಮ್ಮೆ ಪಡುವಂತಹ ವಿಜ್ಞಾನಿ ರೊದ್ದಂ.

  ರೊದ್ದಂ ಕಲ್ಪನೆಯ ಕೂಸು ‘ತೇಜಸ್’(ಎಲ್​ಸಿಎ)

  ದೇಶದಲ್ಲಿ ಎನ್​ಎಎಲ್, ಎಚ್​ಎಎಲ್, ಡಿಆರ್​ಡಿಒ ಮತ್ತು ಇಸ್ರೋ ಆಗಷ್ಟೇ ಅಂಬೆಗಾಲಿಡುತ್ತಿದ್ದ ದಿನಗಳು. ಭಾರತೀಯ ವಾಯುಪಡೆಗೂ ಇವರ ಅಗತ್ಯತೆ ಇತ್ತು. ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದವು. ಎನ್​ಎಎಲ್ ನಿರ್ದೇಶಕ ಎಸ್.ಆರ್. ವೆಲ್ಲುರಿ, ರೊದ್ದಂ ಅವರನ್ನು ಎನ್​ಎಎಲ್​ನ ಕನ್ಸಲ್ಟಂಟ್ ಆಗಿ ನೇಮಿಸಿಕೊಂಡರು. ಯುದ್ಧವಿಮಾನ ಎಚ್​ಎಫ್ 24 ನಿರ್ವಹಣೆ ಬಗ್ಗೆ ತೃಪ್ತಿ ಇರಲಿಲ್ಲ. ವಿಮಾನದ ಕವಚವನ್ನು ಭಾರತ ನಿರ್ವಿುಸಿದ್ದರೆ, ಇಂಜಿನ್ ಬ್ರಿಟನ್ ಪೂರೈಸಿತ್ತು. ಇದನ್ನು ಸೂಪರ್​ಸಾನಿಕ್ ಆಗಿಸುವ ಉದ್ದೇಶವಿತ್ತು. ಆದರೆ, ಎಂಜಿನ್​ನ ರೀಹೀಟ್ ಸಾಮರ್ಥ್ಯವನ್ನು ಹೆಚ್ಚಿಸದೇ ಆ ವೇಗವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇದನ್ನು ಸೂಪರ್ ಸಾನಿಕ್ ವೇಗಕ್ಕೆ ಮೇಲ್ದರ್ಜೆಗೇರಿಸಲು ಯೋಜನಾ ತಂಡವನ್ನು ರೂಪಿಸಲಾಯಿತು. ಎಂಜಿನ್​ನ ರೀಹೀಟ್ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದರ ಜೊತೆಗೆ ಶಬ್ದಾತೀತ ವೇಗಕ್ಕೆ ಹೊಂದಿಸುವುದು ತಂಡ ರಚನೆ ಮುಖ್ಯ ಉದ್ದೇಶವಾಗಿತ್ತು. ಆ ತಂಡದ ಮುಖ್ಯಸ್ಥರನ್ನಾಗಿ ರೊದ್ದಂ ಅವರನ್ನು ನೇಮಿಸಲಾಯಿತು. ತಂಡವು ಅಭಿವೃದ್ಧಿ ಪಡಿಸಿದ ಎಚ್​ಎಫ್ 25 ಉದ್ದೇಶಿತ ಗುರಿಯನ್ನು ತಲುಪಲಿಲ್ಲ. ಇದರ ವೇಗ ಸಾಲದು ಎಂಬ ಅಭಿಪ್ರಾಯ ವಾಯುಪಡೆಯಿಂದ ವ್ಯಕ್ತವಾಯಿತು. ಆಗ ಭಾರತದ ಅಗತ್ಯತೆಯನ್ನು ನಿಖರವಾಗಿ ಮನಗಂಡ ರೊದ್ದಂ ಅಧಿಕ ವೇಗದ ಹಗುರ ಯುದ್ಧವಿಮಾನವನ್ನು ತಯಾರಿಸುವ ಸಲಹೆ ನೀಡಿದರು. ಈ ಬಗ್ಗೆ ಯೋಜನೆಯನ್ನು ರೂಪಿಸಿ 1979ರಲ್ಲಿ ವಾಯುಪಡೆಯ ಮುಂದಿಟ್ಟರು. ಇದಾಗಿ ಬಹಳ ವರ್ಷಗಳ ನಂತರ ಎಲ್​ಸಿಎ ಯೋಜನೆಯನ್ನು ಎಚ್​ಎಎಲ್ ಕೈಗೆತ್ತಿಕೊಂಡಿತು. ಅದನ್ನು ಎಲ್​ಸಿಎ (ಲೈಟ್ ಕಾಂಬ್ಯಾಟ್ ಏರ್​ಕ್ರಾಫ್ಟ್) ಎನ್ನಲಾಗುತ್ತದೆ. ವಾಜಪೇಯಿ ಪ್ರಧಾನಿ ಆಗಿದ್ದಾಗ ಇದಕ್ಕೆ ‘ತೇಜಸ್’ ಎಂದು ನಾಮಕರಣ ಮಾಡಲಾಯಿತು.

  See also  ಕೋಪ ಯಾರಿಗೂ ತರವಲ್ಲ: ಮನೋಲ್ಲಾಸ

  ಪ್ರಶಸ್ತಿಗಳು

  • ಭಟ್ನಾಗರ್ ಪದಕ, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ 1985
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ 1986
  • ಪದ್ಮಭೂಷಣ, ಭಾರತ ಸರ್ಕಾರ 1987
  • ರಾಯಲ್ ಸೊಸೈಟಿಯ ಫೆಲೋ, ಲಂಡನ್, ಯುಕೆ, 1992
  • ಫ್ಲೂಯಿಡ್ ಡೈನಮಿಕ್ಸ್ ಪ್ರಶಸ್ತಿ, ಅಮೆರಿಕನ್ ಇನ್ಸ್​ಟಿಟ್ಯೂಟ್ ಆಫ್ ಏರೋನಾಟಿಕ್ಸ್, 2002
  • ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, 2012
  • ಪದ್ಮವಿಭೂಷಣ, ಭಾರತ ಸರ್ಕಾರ 2013

  (ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಒಟ್ಟು 62 ಪ್ರಶಸ್ತಿ ಮತ್ತು ಪುರಸ್ಕಾರಗಳು ಬಂದಿವೆ)

  ಅಪ್ಪಟ ಕನ್ನಡದ ಪ್ರತಿಭೆ
  ಗಗನ ಸಾಧಕ ರೊದ್ದಂ ನರಸಿಂಹ: ನುಡಿ ನಮನ

  ರೊದ್ದಂ 1933ರ ಜುಲೈ 20 ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕಂದಿನಲ್ಲಿ ಐಐಎಸ್​ಸಿ ಸಮೀಪವೇ ಇದ್ದ ಅಜ್ಜನ ಮನೆಗೆ ಬೇಸಿಗೆ ರಜೆಗೆಂದು ಹೋಗುತ್ತಿದ್ದರು. ಬಾಲ್ಯದಲ್ಲಿ ಶಾಲೆ ಮತ್ತು ಮನೆಯ ವಾತಾವರಣ ಅವರ ಮೇಲೆ ಅಪಾರ ಪ್ರಭಾವ ಬೀರಿತ್ತು. ತಂದೆ ಆರ್.ಎಲ್. ನರಸಿಂಹಯ್ಯ. ಇವರು ವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ಮಾತ್ರವಲ್ಲ, ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು. 1930ರಲ್ಲಿ ಅಲಹಾಬಾದ್​ನಿಂದ ಬೆಂಗಳೂರಿಗೆ ಹಿಂದಿರುಗಿದ ಅವರು ಸೆಂಟ್ರಲ್ ಕಾಲೇಜಿಗೆ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇರುವುದಕ್ಕೆ ಮುನ್ನ ಮನೆಯ ಸಮೀಪದ ಹೈಸ್ಕೂಲ್​ನಲ್ಲಿ ವಿಜ್ಞಾನದ ಪಾಠ ಮಾಡುತ್ತಿದ್ದರು. ಅಲ್ಲದೇ, ವಿಜ್ಞಾನ ಕುರಿತ ವಿಷಯಗಳನ್ನು ಕನ್ನಡದಲ್ಲಿ ನಿರಂತರವಾಗಿ ಬರೆಯುತ್ತಿದ್ದರು. ಮಗನಿಗೆ ತಂದೆ ವಿಜ್ಞಾನವನ್ನೇನೂ ಹೇಳಿಕೊಡಲಿಲ್ಲ. ಆದರೆ, ತಾಯಿ ಆರ್.ಎನ್. ಲೀಲಾದೇವಿ ಸಾಕಷ್ಟು ಪ್ರಭಾವ ಬೀರಿದ್ದರು. ಅಧ್ಯಾತ್ಮದ ಆಸಕ್ತಿಯನ್ನು ಅವರಲ್ಲಿ ಬಿತ್ತಿದ್ದರು.

  ರೊದ್ದಂ ಬೆಂಗಳೂರಿನ ಆಚಾರ್ಯಪಾಠ ಶಾಲೆಯಲ್ಲಿ ಶಿಕ್ಷಣ ಪಡೆದರು. ಮತ್ತೊಬ್ಬ ಶ್ರೇಷ್ಠ ವಿಜ್ಞಾನಿ ಸಿ.ಎನ್.ಆರ್. ರಾವ್ ಕೂಡ ಇದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದರೂ ಇಬ್ಬರ ವಿಭಾಗಗಳು ಮಾತ್ರ ಬೇರೆ ಬೇರೆ. ಇವರಲ್ಲಿ ವಿಜ್ಞಾನಾಸಕ್ತಿ ಮೊಳೆಯುವಲ್ಲಿ ಅಲ್ಲಿನ ಶಿಕ್ಷಕರ ಪಾತ್ರ ಮಹತ್ವದ್ದು. ಅಂದಿನ ದಿನಗಳಲ್ಲಿ ಶಿಕ್ಷಕರಿಗೆ ವೇತನ ಕಡಿಮೆ ಇದ್ದರೂ, ಅತ್ಯುತ್ತಮ ಪಾಠ ಮಾಡುತ್ತಿದ್ದರು. ಅಶ್ವಥನಾರಾಯಣ ಎನ್ನುವ ಶಿಕ್ಷಕರು ನೀಡಿದ ‘ಲೈವ್ಸ್ ಆಫ್ ಗ್ರೇಟ್ ಸೈಂಟಿಸ್ಟ್’ ಪುಸ್ತಕ ರೊದ್ದಂ ಮೇಲೆ ತುಂಬಾ ಪ್ರಭಾವ ಬೀರಿದ್ದು ಮಾತ್ರವಲ್ಲದೆ, ಪಾಶ್ಚಾತ್ಯ ವಿಜ್ಞಾನದ ಬೌದ್ಧಿಕ ಜಗತ್ತಿನ ಕುರಿತಾದ ಒಳಗಣ್ಣನ್ನು ತೆರೆಸಿತು. ಲೆವಿಸ್ ಕರೋಲ್ಸ್ ಅವರ ‘ಆಲೈಸ್ ಇನ್ ವಂಡರ್​ಲ್ಯಾಂಡ್’ ನ ಕನ್ನಡ ರೂಪಾಂತರವೂ ವಿಜ್ಞಾನದತ್ತ ಮತ್ತಷ್ಟು ಸೆಳೆಯಿತು. ಆ ಕಾಲದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನಿ ನೊಬೆಲ್ ವಿಜೇತ ಸಿ.ವಿ. ರಾಮನ್​ಶಾಲೆಗೆ ಭೇಟಿ ನೀಡಿದ್ದು ಮತ್ತು ಆ ಸಂದರ್ಭದಲ್ಲಿ ರಾಮನ್ ಮಾಡಿದ ಭಾಷಣ ರೊದ್ದಂ ಅವರಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿತ್ತು.

  See also  ಜೈಲಿನ ಅಧಿಕಾರಿಗೇ ಗ್ರೀಟಿಂಗ್​ ಕೊಟ್ಟ ರಾಗಿಣಿ; ಇಬ್ಬರ ನಡವಳಿಕೆ ಹೇಗಿದೆ ಗೊತ್ತಾ?

  ಶಾಲಾ ಶಿಕ್ಷಣದ ಬಳಿಕ ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್​ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮುಕ್ತ ದಿನಗಳಂದು(ಓಪನ್ ಡೇ) ಐಐಎಸ್​ಸಿಗೆ ಹೋಗುತ್ತಿದ್ದರು. ಅಲ್ಲಿದ್ದ ವಿವಿಧ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹೀಗೆ ಐಐಎಸ್​ಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎರಡನೇ ವಿಶ್ವ ಮಹಾಯುದ್ಧದ ಪಳೆಯುಳಿಕೆಯಂತಿದ್ದ ಬೆಂಕಿಯುಗುಳುವ ವಿಮಾನವನ್ನು ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದ ಮುಂದೆ ನಿಲ್ಲಿಸಿದ್ದನ್ನು ಕಂಡರು. ಮೊದಲ ನೋಟದಲ್ಲೇ ವಿಮಾನದ ಬಗ್ಗೆ ಮೋಹ ಉಂಟಾಯಿತು. ವಿಶೇಷವಾಗಿ ಯುದ್ಧವಿಮಾನದ ಒಟ್ಟಾರೆ ವಿನ್ಯಾಸ ಮತ್ತು ಸಂಕೀರ್ಣ ತಂತ್ರಜ್ಞಾನದತ್ತ ಅವರಲ್ಲಿ ಒಲವು ಮೂಡಿತ್ತು. ಆ ಬಳಿಕ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬದಲಿಗೆ ಏರೋನಾಟಿಕಲ್ ಎಂಜಿನಿಯರಿಂಗ್​ಗೆ ಸೇರಿಕೊಳ್ಳಲು ನಿರ್ಧರಿಸಿದರು. ಮಗನ ನಿರ್ಧಾರಕ್ಕೆ ತಂದೆಯಿಂದ ಬೆಂಬಲ ಮತ್ತು ಪ್ರೋತ್ಸಾಹ ಸಿಕ್ಕಿತು. ಐಐಎಸ್​ಸಿಯಲ್ಲೇ ಏರೋನಾಟಿಕಲ್ ಎಂಜಿನಿಯರಿಂಗ್​ನ ಡಿಪ್ಲೊಮಾಗೆ ಸೇರಿದರು. 1950ರಲ್ಲಿ ಜರ್ಮನಿಗೆ ಹೋದರು. ಹಾಗೆ ಹೋಗುವಾಗ, ರೊದ್ದಂ ಅವರಿಗೆ ನೀಡಿದ ಉಪದೇಶವೆಂದರೆ, ಗೊಟೆನ್​ಜೆನ್ ಅಥವಾ ಕಾಲ್​ಟೆಕ್​ನಲ್ಲಿ ಪಿಎಚ್.ಡಿ ಮಾಡಿ ಎಂಬುದಾಗಿತ್ತು. ಆಗಷ್ಟೇ ಹೊಸದಾಗಿ ಬಂದಿದ್ದ ಸತೀಶ್ ಧವನ್ ಕ್ಯಾಲಿಫೋರ್ನಿಯಾದ ಕಾಲ್​ಟೆಕ್​ನಲ್ಲಿ ಪಿಎಚ್​ಡಿ ಮಾಡಲು ಸಲಹೆ ನೀಡಿದರು. ಆ ಪ್ರಕಾರ, ಕಾಲ್​ಟೆಕ್​ನಲ್ಲಿ ಪಿಎಚ್​ಡಿ ಮಾಡಿದರು. 1962ರಲ್ಲಿ ಐಐಎಸ್​ಸಿ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಸಹಾಯಕ ಪ್ರೊಫೆಸರ್ ಆಗಿ ಸೇರಿಕೊಂಡರು. ಮುಂದೆ ರೊದ್ದಂ ವೈಮಾನಿಕ ಕ್ಷೇತ್ರದಲ್ಲಿ ತ್ರಿವಿಕ್ರಮ ಸಾಧನೆ ಮಾಡಿದ್ದು ಇತಿಹಾಸ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts