ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ಯಶ್‌-ರಾಧಿಕಾರ ಮಗಳಿಗೆ ಕೊನೆಗೂ ಹೆಸರು ಫಿಕ್ಸ್‌, ಹೆಸರೇನು ಗೊತ್ತಾ?

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಪುತ್ರಿಗೆ ಹೆಸರಿಟ್ಟಿದ್ದು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಇಷ್ಟು ದಿನ ತಮ್ಮ ಮುದ್ದಿನ ಮಗಳ ನಾಮಕರಣದ ಬಗ್ಗೆ, ಯಾವ ಹೆಸರಿಡಲಿದ್ದಾರೆ ಎನ್ನುವತ್ತ ಎದ್ದಿದ್ದ ಹಲವು ಪ್ರಶ್ನೆಗಳಿಗೆ ಕೊನೆಗೂ ಸ್ಟಾರ್​ ದಂಪತಿ ಉತ್ತರ ನೀಡಿದ್ದಾರೆ.

ಯಶ್‌ ಪುತ್ರಿಗೆ ಮುದ್ದಾದ ಹೆಸರನ್ನು ನೀಡಿದ್ದು ‘ಆಯ್ರಾ’ ಎಂದು ನಾಮಕರಣ ಮಾಡಿದ್ದಾರೆ. ರಾಧಿಕಾ ಮತ್ತು ಯಶ್ ಇಬ್ಬರ ಹೆಸರನ್ನು ಸೇರಿಸಿ ಮಗಳಿಗೆ ಹೊಸ ಹೆಸರು ಇಟ್ಟಿದ್ದು, ಆಯ್ರಾ ಎಂದರೆ ‘ಗೌರವಾನ್ವಿತ’ ಎಂದು ಅರ್ಥ ಬರುತ್ತದೆ.

ಇಂದು ಬೆಳಗ್ಗೆ ತಾಜ್ ವೆಸ್ಟ್ ಎಂಡ್‌ನಲ್ಲಿ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರೊಂದಿಗಷ್ಟೇ ನಡೆದ ನಾಮಕರಣ ಸಮಾರಂಭದಲ್ಲಿ ಪುತ್ರಿಗೆ ಮುದ್ದಾದ ಹೆಸರನ್ನಿಟ್ಟು ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.

ಈ ಕುರಿತು ನಟ ಯಶ್‌ ಟ್ವಿಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ನಾಮಕರಣದ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ವಿಡಿಯೋದ ಕೊನೆಯಲ್ಲಿ ಆಯ್ರಾ ವೀ ಲವ್‌ ಯು ಎಂದು ಹೇಳಲಾಗಿದ್ದು, ನಮ್ಮ ಪ್ರೀತಿಯ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ. ಹರಸಿ ಹಾರೈಸಿ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ 2ರಂದು ರಾಧಿಕಾ ಯಶ್‌ರಿಗೆ ಪುತ್ರಿ ಹುಟ್ಟಿದಾಗಿನಿಂದಲೂ ಮಗುವನ್ನು ಬೇಬಿ ವೈಆರ್ ಎಂದೇ ಕರೆಯಲಾಗುತ್ತಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *