ಬಾಲಿವುಡ್​ ನಟ ಶ್ರೇಯಸ್​ಗೆ ನಟ ಯಶ್ ಅಂದ್ರೆ ಇಷ್ಟವಂತೆ…

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಪರಭಾಷೆಯಲ್ಲೂ ಸದ್ದು ಮಾಡುತ್ತಿವೆ. ‘ದಿ ವಿಲನ್’, ‘ಕೆಜಿಎಫ್’, ‘ಅವನೇ ಶ್ರೀಮನ್ನಾರಾಯಣ’ ಸೇರಿ ಇನ್ನೂ ಕೆಲವು ಚಿತ್ರಗಳು ಗಡಿದಾಟಿ ಹೊರಟಿವೆ. ಕ್ವಾಲಿಟಿ ಮೇಕಿಂಗ್​ನಿಂದಲೇ ಅಲ್ಲಿನ ಸಿನಿಮಾ ಮಂದಿಯನ್ನೂ ಸ್ಯಾಂಡಲ್​ವುಡ್ ಸೂಜಿಗಲ್ಲಿನಂತೆ ಸೆಳೆದುಕೊಳ್ಳುತ್ತಿದೆ. ಕಲಾವಿದರ ಬಗ್ಗೆಯೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಅದೇ ರೀತಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಸಹ ಕನ್ನಡ ನಟರ ಬಗ್ಗೆ ಮಾತನಾಡಿ ದ್ದಾರೆ.

ವರನಟ ಡಾ. ರಾಜ್​ಕುಮಾರ್ ಮತ್ತು ‘ರಾಕಿಂಗ್ ಸ್ಟಾರ್’ ಯಶ್ ನನ್ನ ನೆಚ್ಚಿನ ನಟರು. ರಾಜ್​ಕುಮಾರ್ ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದಿದ್ದೇನೆ. ಅದೇ ರೀತಿ ಯಶ್ ಸಿನಿಮಾಗಳೂ ನನಗೆ ಇಷ್ಟ’ ಎಂದು ಹೇಳಿಕೊಂಡಿದ್ದಾರೆ. ಯಶ್ ನಟನೆಯ ‘ಕೆಜಿಎಫ್’ ಹಿಂದಿ ಭಾಷೆಯಲ್ಲೂ ತೆರೆಕಾಣುತ್ತಿರುವುದರಿಂದ ಚಿತ್ರದ ಬಗ್ಗೆ ಬಿ-ಟೌನ್​ನಲ್ಲೂ ಟಾಕ್ ಶುರುವಾಗಿದೆ. ಮಂಗಳವಾರ ಲಾಲ್​ಬಾಗ್ ಬಳಿ ಖಾಸಗಿ ರೆಸ್ಟೋರೆಂಟ್ ಉದ್ಘಾಟನೆಗೆ ಆಗಮಿಸಿದ್ದ ಶ್ರೇಯಸ್, ಬೆಂಗಳೂರು ಮತ್ತು ಕನ್ನಡ ಸಿನಿಮಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.