ನವದೆಹಲಿ: ದೂರ ನಿಯಂತ್ರಣದ ಮೂಲಕ ರೋಬೋದಿಂದ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಮೊದಲಿಗರೆಂಬ ಹೆಗ್ಗಳಿಕೆಗೆ ರಾಜಸ್ಥಾನದ ಜೈಪುರದ ವ್ಯಕ್ತಿಯೊಬ್ಬರು ಪಾತ್ರರಾಗಿದ್ದಾರೆ. 270 ಕಿಮೀ ದೂರದ ಗುರುಗ್ರಾಮದಿಂದ ಸರ್ಜನ್ ಒಬ್ಬರು ರೊಬೋವನ್ನು ನಿಯಂತ್ರಿಸಿ 56 ವರ್ಷದ ವ್ಯಕ್ತಿಗೆ ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ)ಅನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಭಾರತೀಯ ರೋಬೋ ತಯಾರಕ ಎಸ್ಎಸ್ ಇನ್ನೋವೆಷನ್ಸ್ ಕಂಪನಿಯ ಅಧಿಕಾರಿಗಳು ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಇನ್ನೊಂದು ಮಜಲನ್ನು ತಲುಪಿದಂತಾಗಿದೆ.
ಅನುಕೂಲಗಳು: ಕೊರೊನರಿ ಆರ್ಟರಿಗಳು ಬ್ಲಾಕ್ ಆದ ರೋಗಿಗಳಲ್ಲಿ ರಕ್ತ ಪೂರೈಕೆಯನ್ನು ಪೂರೈಸಲು ರೋಬೋಟಿಕ್ ಸಿಎಬಿಜಿ ಕಡಿಮೆ-ಒಳಹೊಗುವ (ಲೆಸ್-ಇನ್ವೇಸಿವ್) ಪರ್ಯಾಯ ವಾಗಿದೆ. ಆಸ್ಪತ್ರೆಯಲ್ಲಿ ಉಳಿಯಬೇಕಾದ ಸಮಯ ಕಡಿಮೆಯಾಗುತ್ತದೆ. ಅಷ್ಟು ಮಾತ್ರವಲ್ಲದೆ, ಸಾಂಪ್ರದಾಯಿಕ ತೆರೆದ- ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಚೇತರಿಸಿಕೊಳ್ಳಲು ಬೇಕಾದ್ದಕ್ಕಿಂತ ಕಡಿಮೆ ಅವಧಿಯಲ್ಲಿ ಸುಧಾರಿಸಿಕೊಳ್ಳಬಹುದಾಗಿದೆ.