ಸಿಡಿದ ಉತ್ತಪ್ಪ, ಬ್ಲಾಸ್ಟರ್ಸ್​ಗೆ ಭರ್ಜರಿ ಗೆಲುವು

| ರಘುನಾಥ್.ಡಿ.ಪಿ,

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ 7ನೇ ಆವೃತ್ತಿಯ ಆರಂಭಕ್ಕೆ ಮಳೆ ಅಡ್ಡಿಯಾದರೂ, ಬೌಂಡರಿ-ಸಿಕ್ಸರ್​ಗಳ ಸಿಡಿಲಿನ ಆಟ ಬಂದಿದ್ದು ಬೆಂಗಳೂರು ಬ್ಲಾಸ್ಟರ್ಸ್ ತಂಡದಿಂದ. ಅನುಭವಿ ರಾಬಿನ್ ಉತ್ತಪ್ಪ (81ರನ್, 38 ಎಸೆತ, 8 ಬೌಂಡರಿ, 6 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು 67 ರನ್​ಗಳಿಂದ ಮಣಿಸಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಕೆಪಿಎಲ್-7ರ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬ್ಲಾಸ್ಟರ್ಸ್ ತಂಡ 5 ವಿಕೆಟ್​ಗೆ 228 ರನ್ ಕಲೆಹಾಕಿತು. ಐಪಿಎಲ್ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದ ಉತ್ತಪ್ಪ ನೆರೆದಿದ್ದ 11 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ರಂಜಿಸಿದ್ದರಿಂದ, ಬೆಂಗಳೂರು ಬ್ಲಾಸ್ಟರ್ಸ್ ಕೆಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ ದಾಖಲಿಸಿತು. ಪ್ರತಿಯಾಗಿ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಹಿನ್ನಡೆ ಕಂಡ ಬೆಳಗಾವಿ ಪ್ಯಾಂಥರ್ಸ್, ಎಚ್​ಎಸ್ ಶರತ್ (49ರನ್, 25 ಎಸೆತ, 2 ಬೌಂಡರಿ, 5 ಸಿಕ್ಸರ್) ಬಿರುಸಿನ ಆಟದ ಹೊರತಾಗಿಯೂ 8 ವಿಕೆಟ್​ಗೆ 161 ರನ್ ಪೇರಿಸಿತು.

ಪ್ಯಾಂಥರ್ಸ್​ಗೆ ಕೈಕೊಟ್ಟ ಸ್ಟಾರ್ಸ್: ಬೆಂಗಳೂರು ಬ್ಲಾಸ್ಟರ್ಸ್ ನೀಡಿದ ಕಠಿಣ ಗುರಿ ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ತಂಡ ಮೊದಲ ಓವರ್​ನಲ್ಲೇ ಶಾಕ್ ಅನುಭವಿಸಿತು. ಕಳೆದ ಬಾರಿ ಬೆಳಗಾವಿ ತಂಡ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾಲಿನ್ ಹೂವರ್, ಮೊದಲ ಓವರ್​ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಇದರಿಂದ ಆರಂಭದಲ್ಲೇ ಕುಸಿತ ಅನುಭವಿಸಿದ ಪ್ಯಾಂಥರ್ಸ್, ಭರವಸೆಯ ಸಾದಿಕ್ ಕೀರ್ವನಿ (18ರನ್, 18 ಎಸೆತ, 2 ಬೌಂಡರಿ) ಹಾಗೂ ದಿಕ್ಷಾಂಶು ನೇಗಿ (20ರನ್, 18 ಎಸೆತ, 3 ಬೌಂಡರಿ) ಕೆಲಕಾಲ ಜತೆಯಾದರೂ ಬಿರುಸಿನ ಆಟ ತೋರುವಲ್ಲಿ ಹಿನ್ನಡೆ ಅನುಭವಿಸಿದರು. ಈ ಜೋಡಿ ಕೇವಲ 2 ರನ್​ಗಳ ಅಂತರದಲ್ಲಿ ನಿರ್ಗಮಿಸಿತು. ಕೇವಲ 41 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡ ಪ್ಯಾಂಥರ್ಸ್ ಸೋಲಿತ್ತ ಮುಖಾಮಾಡಿತು. ಸ್ಟುವರ್ಟ್ ಬಿನ್ನಿ (6) ವೈಫಲ್ಯ ಮುಂದುವರಿಸಿದರು. -ಏಜೆನ್ಸೀಸ್

81 ರನ್ ಬಾರಿಸುವ ಮೂಲಕ ರಾಬಿನ್ ಉತ್ತಪ್ಪ ಕೆಪಿಎಲ್​ನಲ್ಲಿ ತಮ್ಮ ವೈಯಕ್ತಿಕ ಗರಿಷ್ಠ ರನ್ ಸಾಧನೆ ಮಾಡಿದರು. ಇದಕ್ಕೂ ಮುನ್ನ 2015ರಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಹುಬ್ಬಳ್ಳಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ಪರವಾಗಿ ಅಜೇಯ 73 ರನ್ ಬಾರಿಸಿದ್ದು ಅವರ ಗರಿಷ್ಠ ಮೊತ್ತವಾಗಿತ್ತು.

ಎಚ್. ಎಸ್. ಶರತ್ ಏಕಾಂಗಿ ಹೋರಾಟ

ತಂಡ ಬಹುತೇಕ ಸೋಲಿನತ್ತ ಮುಖಮಾಡಿದರೂ ಎದೆಗುಂದದ ಎಚ್​ಎಸ್ ಶರತ್ (49ರನ್, 25 ಎಸೆತ, 2 ಬೌಂಡರಿ, 5 ಸಿಕ್ಸರ್) ಪ್ರೇಕ್ಷಕರನ್ನು ರಂಜಿಸಿದರು. ಮಿತ್ರಕಾಂತ್ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಶರತ್, ಏಕಾಂಗಿ ಹೋರಾಟ ನಡೆಸಿದರು. ಆನಂದ್ ಕಟ್ಟಿಮನಿ ಎಸೆತದಲ್ಲಿ ಮುನ್ನುಗ್ಗಲು ಯತ್ನಿಸಿ ಸ್ಟಂಪ್ ಆಗುವ ಮೂಲಕ ಕೇವಲ ಒಂದು ರನ್​ನಿಂದ ಅರ್ಧಶತಕ ತಪ್ಪಿಸಿಕೊಂಡರೂ ತಂಡದ ಸೋಲನ್ನು ತಗ್ಗಿಸಿದರು. ಬ್ಲಾಸ್ಟರ್ಸ್ ಪರ ಮನೋಜ್ ಭಾಂಡಗೆ 3 ವಿಕೆಟ್ ಕಬಳಿಸಿ ಮಿಂಚಿದರು.

ಶತಕದ ಸನಿಹ ಎಡವಿದ ರಾಬಿನ್

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡಕ್ಕೆ ರಾಬಿನ್ ಹಾಗೂ ವಿಶ್ವನಾಥನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರಂಭಿಕ ಕೆಬಿ ಪವನ್ (7) ನಿರ್ಗಮನದ ಬಳಿಕ ಎಂ ವಿಶ್ವನಾಥನ್ (46 ರನ್, 26 ಎಸೆತ, 6 ಬೌಂಡರಿ, 2 ಸಿಕ್ಸರ್) ಜತೆಯಾದ ನಾಯಕ ರಾಬಿನ್ ಉತ್ತಪ್ಪ ರನ್ ವೇಗಕ್ಕೆ ಚಾಲನೆ ನೀಡಿದರು. 2ನೇ ವಿಕೆಟ್ ಈ ಜೋಡಿ 42 ಎಸೆತಗಳಲ್ಲಿ 75 ರನ್ ಜತೆಯಾಟವಾಡಿತ್ತು. ವಿಶ್ವನಾಥನ್ ನಿರ್ಗಮನದ ಬಳಿಕವೂ ರನ್​ವೇಗನ್ನು ಕಾಯ್ದುಕೊಂಡ ರಾಬಿನ್​ಉತ್ತಪ್ಪಗೆ ಆಲ್ರೌಂಡರ್ ಪವನ್ ದೇಶಪಾಂಡೆ (46ರನ್, 30ಎಸೆತ, 2 ಬೌಂಡರಿ, 2 ಸಿಕ್ಸರ್) ಸಾಥ್ ನೀಡಿದರು. ಅನುಭವಿ ಬೌಲಿಂಗ್ ಪಡೆಯ ಲಾಭ ಗಿಟ್ಟಿಸಿಕೊಂಡ ಈ ಜೋಡಿ ಹೆಚ್ಚಾಗಿ ಬೌಂಡರಿ, ಸಿಕ್ಸರ್​ಗಳನ್ನು ಸಿಡಿಸಿ ಗಮನಸೆಳೆಯಿತು. 3ನೇ ವಿಕೆಟ್​ಗೆ 65 ರನ್ ಪೇರಿಸಿತು. ಶತಕ ಸನಿಹದಲ್ಲಿದ್ದ ರಾಬಿನ್ ಉತ್ತಪ್ಪ ಬಿನ್ನಿ ಎಸೆತದಲ್ಲಿ ಸ್ಟಾ್ಯಲಿನ್ ಹೂವರ್​ಗೆ ಕ್ಯಾಚ್ ನೀಡಿದರು.

ಮಳೆಯಲ್ಲೇ ಉದ್ಘಾಟನಾ ಸಮಾರಂಭ

ಮಳೆಯಲ್ಲೂ ಯುವ ಉತ್ಸಾಹಿಗಳ ನರ್ತನ. ಬೆಂಬಿಡದ ಮಳೆಯ ನಡುವೆಯೂ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದ ಪ್ರೇಕ್ಷಕರ ಮನಗೆದ್ದರು. ಮಳೆರಾಯನ ಸಿಂಚನದ ನಡವೆಯೇ 7ನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್​ಗೆ (ಕೆಪಿಎಲ್) ಚಾಲನೆ ನೀಡಲಾಯಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಉದ್ಘಾಟನಾ ಸಮಾರಂಭದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್ ನಟ ನಿಖಿಲ್ ಕುಮಾರಸ್ವಾಮಿ, ನಟಿ ರಾಗಿಣಿ, ಬಿಗ್​ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಮೆರಗು ತುಂಬಿದರು.