ಬೇನಾಮಿ ಆಸ್ತಿ ಪ್ರಕರಣ: 3ನೇ ಬಾರಿಗೆ ವಿಚಾರಣೆಗೆ ಹಾಜರಾದ ರಾಬರ್ಟ್‌ ವಾದ್ರಾ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಹಾಗೂ ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸೋದರಿ ಪ್ರಿಯಾಂಕ ಗಾಂಧಿ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಸತತ ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಬುಧವಾರ ಮತ್ತು ಗುರುವಾರವೂ ಇ.ಡಿ.ಕಚೇರಿಗೆ ಹಾಜರಾಗಿದ್ದ ವಾದ್ರಾ ಅವರನ್ನು ಬರೋಬ್ಬರಿ 11 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ಕೇಂದ್ರೀಯ ದೆಹಲಿಯಲ್ಲಿ ಜಮ್ನಾಗರ್ ಹೌಸ್‌ನಲ್ಲಿರುವ ಇ.ಡಿ. ಕಚೇರಿ ಮುಂದೆ ಇಂದು ಬೆಳಗ್ಗೆ 10.45ರ ಸುಮಾರಿಗೆ ಬಂದಿದ್ದಾರೆ. ಎರಡು ದಿನಗಳ ವಿಚಾರಣೆಯಲ್ಲೂ ಸ್ವತಃ ಪ್ರಿಯಾಂಕ ಗಾಂಧಿಯವರೇ ವಾದ್ರಾರನ್ನು ಇ.ಡಿ. ಕಚೇರಿವರೆಗೆ ತಂದು ಬಿಟ್ಟಿದ್ದರು ಮತ್ತು ವಿಚಾರಣೆ ಮುಗಿದ ಬಳಿಕ ಕರೆದೊಯ್ದಿದ್ದರು.

ಲಂಡನ್‌ನಲ್ಲಿ ವಾದ್ರಾ ಹೊಂದಿರುವ ಸುಮಾರು 12 ಮಿಲಿಯನ್‌ ಪೌಂಡ್ಸ್‌ನಷ್ಟು ಆಸ್ತಿಯನ್ನು ಹೊಂದಿರುವ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿವಾದಾತ್ಮಕ ಶಸ್ತ್ರಾಸ್ತ್ರ ಡೀಲರ್‌ ಸಂಜಯ್ ಭಂಡಾರಿ, ಅವರ ಸಂಬಂಧಿ ಮತ್ತು ಇನ್ನಿಬ್ಬರ ಕುರಿತು ಕೇಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)