ಬೆಂಗಳೂರು: ಸಂಕ್ರಾಂತಿಯ ಈ ಸಂದರ್ಭದಲ್ಲಿ ಉತ್ತರಾಯಣ ಒಂದೆಡೆಯಾದರೆ, ದರ್ಶನ್ ಅಭಿಮಾನಿಗಳಿಗೆ ಈ ಸಂಕ್ರಮಣದಲ್ಲಿ ‘ರಾಬರ್ಟಾಯಣ’ ಕೂಡ ಆಗಿದೆ. ಅಂದರೆ ಸಂಕ್ರಾಂತಿ ಪ್ರಯುಕ್ತ ‘ರಾಬರ್ಟ್’ ಚಿತ್ರತಂಡ ಬಿಡುಗಡೆ ಮಾಡಿರುವ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ನಲ್ಲಿ ರಾಮಾಯಣದ ಝುಲಕ್ ರಾರಾಜಿಸಿದೆ. ‘ಕ್ರಿಸ್ವುಸ್’ ಸಂದರ್ಭದಲ್ಲಿ ಬಿಡುಗಡೆ ಆಗಿದ್ದ ಮೋಷನ್ ಪೋಸ್ಟರ್ನಲ್ಲಿ ಶಿಲುಬೆ ಧರಿಸಿ ಬಂದಿದ್ದ, ‘ರಾಬರ್ಟ್’ ಈಗ ಸಂಕ್ರಾಂತಿ ಸಂಭ್ರಮದಲ್ಲಿ ಹನುಮನಾಗಿ ಆಗಮಿಸಿದ್ದಾನೆ. ಹೌದು.. ಜ. 15ರಂದು ಬಿಡುಗಡೆ ಆಗಿರುವ ‘ರಾಬರ್ಟ್’ ಚಿತ್ರದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ನಲ್ಲಿ ಜೈಶ್ರೀರಾಮ್ ಘೋಷಣೆಗಳ ನಡುವೆ ದರ್ಶನ್, ರಾಮಭಕ್ತ ಹನುಮನಾಗಿ ದರ್ಶನ ನೀಡಿದ್ದಾರೆ. ಈ ಮೂಲಕ ‘ರಾಬರ್ಟ್’ ಚಿತ್ರದ ಬಗ್ಗೆ ಅಭಿಮಾನಿಗಳಿಗಿದ್ದ ಕುತೂಹಲ ಮತ್ತಷ್ಟು ಕೆರಳಿದೆ. ಮಾತ್ರವಲ್ಲ, ದರ್ಶನ್ ಅವರ ಈ ಲುಕ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಸೋಷಿಯಲ್ ಮೀಡಿಯಾದಲ್ಲೂ ‘ರಾಬರ್ಟ್’ ಮೋಷನ್ ಪೋಸ್ಟರ್ ಭರ್ಜರಿ ಹರಿದಾಡುತ್ತಿದೆ.
‘ಉಮಾಪತಿ ಫಿಲಮ್್ಸ’ ಬ್ಯಾನರ್ನಲ್ಲಿ ಎಸ್.ಉಮಾಪತಿ ಅವರ ಅದ್ದೂರಿ ನಿರ್ವಣದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಈಗ ಪೋಸ್ಟರ್ ಮೂಲಕ ಅವರು ಚಿತ್ರದ ಕುರಿತ ಕುತೂಹಲ ಹೆಚ್ಚಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ, ಬಿಲ್ಲಿನಿಂದ ಚಿಮ್ಮುವ ಬಾಣ, ಗದೆ, ಬೃಹತ್ ಪಾದ, ರಾವಣ ಪ್ರತಿಕೃತಿ ದಹನ, ಶ್ರೀರಾಮನನ್ನು ಹೆಗಲ ಮೇಲೆ ಕೂರಿಸಿಕೊಂಡು ಹನುಮನ ಆಗಮನ.. ಹೀಗೆ ರಾಮಾಯಣದ ಪ್ರಮುಖ ದೃಶ್ಯಗಳನ್ನು ಒಳಗೊಂಡಿರುವ ‘ರಾಬರ್ಟ್’ ಮೋಷನ್ ಪೋಸ್ಟರ್ ಈಗ ಕಥೆ ಬಗ್ಗೆ ಕೌತುಕ ಮೂಡಿಸಿದೆ.
ಈ ಸಿನಿಮಾದಲ್ಲಿ ದರ್ಶನ್ಗೆ ಜತೆಯಾಗಿ ಆಶಾ ಭಟ್ ಅಭಿನಯಿಸಿದ್ದು, ಸೋನಲ್ ಮೊಂತೆರೊ, ವಿನೋದ್ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಜಗಪತಿ ಬಾಬು ಖಳನಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರತಂಡದ ಸದ್ಯದ ಯೋಜನೆಗಳ ಪ್ರಕಾರ ಏ. 9ಕ್ಕೆ ರಾಬರ್ಟ್ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ.