ಮೈಸೂರು: ಪ್ರಯಾಣಿಕರಿಗೆ ರೈಲಿನಲ್ಲಿ ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1,01,830 ರೂ. ವೌಲ್ಯದ ನಗದು ಮತ್ತು ಮೊಬೈಲ್‌ಗಳೊಂದಿಗೆ ಮಾರಕಾಸಗಳನ್ನು ವಶಪಡಿಸಿಕೊಳ್ಳಲಾಗಿದೆ. 17 ವರ್ಷದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಂದಿಗೆ ಮೈಸೂರಿನ ಭಾರತ್ ನಗರದ ಶೈಕ್ ಶೋಹೈಬ್(22), ಸಾಹಿಲ್ ಖಾನ್(20), ಮಹಮ್ಮದ್ ಯಾಸೀನ್(22) ಬಂಧಿತರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಫೆ.11ರಂದು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಮದ್ದೂರು ದಾಟಿ ತೆರಳುತ್ತಿದ್ದಂತೆ ಬೋಗಿಗೆ ನುಗ್ಗಿದ ಈ ನಾಲ್ವರು ಆರೋಪಿಗಳು ತಲ್ವಾರ್ ಮತ್ತು ಚಾಕು ತೋರಿಸಿ ಪ್ರಯಾಣಿಕರಾದ ಮಳವಳ್ಳಿಯ ನಿವಾಸಿ ಚಂದನ್, ಗಗನ್ ನಾಯಕ್, ಶಿವಾನಂದ, ವಿ.ವಿ.ಸುರೇಂದ್ರನ್, ರಾಜು ಅವರನ್ನು ಬೆದರಿಸಿ ಅವರ ಬಳಿ ಇದ್ದ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಿ ಬಂಧಿಸಿದ್ದಾರೆ.
ರೈಲ್ವೆ ಎಸ್ಪಿ ಡಾ.ಎಸ್.ಕೆ.ಸೌಮ್ಯ ಲತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿ.ಚೇತನ್, ಎಸ್‌ಐಗಳಾದ ಬಿ.ಪಿ.ರಮೇಶ್, ಸಿ.ಜಿ.ಮಹೇಶ್, ಸಿಬ್ಬಂದಿ ಶ್ರೀನಿವಾಸ್, ಶ್ರೀನಿವಾಸ ಮೂರ್ತಿ, ರಂಗೇಗೌಡ, ಜಗದೀಶ್, ಆರ್.ಪ್ರಶಾಂತ್, ಆರ್.ಶ್ವೇತಾ, ಮೋಹನ್, ರಘು, ಮಂಜು, ಯೋಗಾನಂದ, ಬಸವರಾಜು, ಜಿ.ಚೈತ್ರಾ, ಸುಮಿತ್ರ ಪಾಲ್ಗೊಂಡಿದ್ದರು.