ಕಳ್ಳರ ಕೈಚಳಕ, ಪೊಲೀಸರ ವೈಫಲ್ಯ

blank

ಹಿರೇಕೆರೂರ: ಸೋಮವಾರಕ್ಕೊಮ್ಮೆ ನಡೆಯುವ ಪಟ್ಟಣದ ಪ್ರಸಿದ್ಧ ಸಂತೆಯಲ್ಲಿ ಕಳ್ಳರ ಕೈಚಳಕದಿಂದ ಮೊಬೈಲ್​ಫೋನ್ ಕಳೆದುಕೊಂಡವರ ಪಟ್ಟಿ ದೊಡ್ಡದು. ಆದರೆ, ಇಲ್ಲಿಯವರೆಗೂ ಪೊಲೀಸರು ಒಬ್ಬ ಕಳ್ಳನನ್ನೂ ಬಂಧಿಸದಿರುವುದು ವಿಪರ್ಯಾಸ.

ಶ್ರೀ ದುರ್ಗಾದೇವಿ ಸಂತೆ ಮೈದಾನದಲ್ಲಿ ಸೋಮವಾರಕ್ಕೊಮ್ಮೆ ನಡೆಯುವ ಸಂತೆಯು ಸುತ್ತಲಿನ ಗ್ರಾಮ, ಪಟ್ಟಣ, ಜಿಲ್ಲೆಗಳಲ್ಲೂ ಪ್ರಸಿದ್ಧಿ ಹೊಂದಿದೆ. ಎಲ್ಲ ತರಹದ ತರಕಾರಿ, ಬೇಳೆಗಳು, ಸಾಂಬಾರು ಪದಾರ್ಥ ಸೇರಿ ವಿವಿಧ ಆಹಾರ ಸಾಮಗ್ರಿಗಳು, ಕೃಷಿ ಪರಿಕರಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಒಂದೇ ಕಡೆ ದೊರೆಯುವುದರಿಂದ ಈ ಸಂತೆ ಮಹತ್ವ ಪಡೆದಿದೆ.

ದೂರದ ಶಿರಾಳಕೊಪ್ಪ, ಸೊರಬ, ಸಿದ್ದಾಪುರ, ಸಾಗರ, ಶಿರಸಿ, ಕಾರವಾರ, ಗೋವಾ ರಾಜ್ಯ, ವಿವಿಧ ಭಾಗಗಳಿಗೆ ಇಲ್ಲಿಂದ ಬೇಳೆಗಳನ್ನು ರಫ್ತು ಮಾಡಲಾಗುತ್ತದೆ. ಬೇರೆ ಬೇರೆ ಭಾಗಗಳಿಂದ ಆಗಮಿಸುವ ವ್ಯಾಪಾರಸ್ಥರು ತರಕಾರಿ, ಬೇಳೆಗಳನ್ನು ಖರೀದಿಸಿ ದೊಡ್ಡ ಪಟ್ಟಣಗಳಿಗೆ ರವಾನಿಸುತ್ತಾರೆ. ಹೀಗಾಗಿ, ಸಾವಿರಾರು ಜನರು ಈ ಸಂತೆಗೆ ಆಗಮಿಸುತ್ತಾರೆ. ಅಂದು ಜನದಟ್ಟಣೆ ವಿಪರೀತವಾಗಿರುತ್ತದೆ. ಇದರ ಲಾಭ ಪಡೆದು ಹೊಂಚು ಹಾಕಿ ಮೊಬೈಲ್​ಫೋನ್ ಎಗರಿಸಲು ತಂಡಗಳೇ ಕಾರ್ಯೋನ್ಮುಖವಾಗಿರುತ್ತವೆ.

ಈಗಿರುವ ಸಂತೆ ಮೈದಾನ ಚಿಕ್ಕದಾಗಿರುವುದರಿಂದ ಹಾಗೂ ದಾರಿಯ ಮಧ್ಯದಲ್ಲೇ ತರಕಾರಿ ಮಾರಾಟ ಮಾಡುತ್ತಿರುವುದರಿಂದ ಗ್ರಾಹಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಇದರ ಲಾಭ ಪಡೆದುಕೊಳ್ಳುವ ಖದೀಮರು ತರಕಾರಿ, ಇತರೆ ಪದಾರ್ಥಗಳನ್ನು ಖರೀದಿಸುವಾಗ, ಹಣ ನೀಡುವಲ್ಲಿ ಮಗ್ನರಾದಾಗ, ಜನದಟ್ಟಣೆ ಮಧ್ಯೆ ನಡೆದಾಡುವಾಗ ಕೈಚಳಕ ತೋರಿಸುತ್ತಾರೆ. ಜನರ ಅನುಭವಕ್ಕೆ ಬಾರದಂತೆ ಮೊಬೈಲ್​ಫೋನ್ ಎಗರಿಸುವುದರಿಂದ ಕಳ್ಳರು ಪಕ್ಕದಲ್ಲೇ ಇದ್ದರೂ ಜನರಿಗೆ ಗೊತ್ತಾಗುವುದಿಲ್ಲ. ಹೀಗಾಗಿ, ಸಂತೆಯಲ್ಲಿ ಹೆಚ್ಚು ಜನರು ಮೊಬೈಲ್​ಫೋನ್ ಕಳೆದುಕೊಂಡಿದ್ದಾರೆ.

ಇಷ್ಟೆಲ್ಲ ಮೊಬೈಲ್​ಫೋನ್ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ, ಈ ಬಗ್ಗೆ ಠಾಣೆಗೆ ದೂರುಗಳು ಬಂದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ದೂರು ದಾಖಲಿಸಿ ಹೆಣಗಾಡುವುದು ಬೇಡ, ದೂರು ಕೊಟ್ಟವರಿಗೆ ಮರಳಿ ಮೊಬೈಲ್​ಫೋನ್ ಸಿಕ್ಕ ಉದಾಹರಣೆಯೂ ಇಲ್ಲ ಎಂದು ಸುಮ್ಮನಾದವರ ಸಂಖ್ಯೆಯೂ ಕಡಿಮೆಯೇನಿಲ್ಲ.

ಪಟ್ಟಣದ ಚನ್ನೇಶ ಶಾಸ್ತ್ರೀಮಠದ 22 ಸಾವಿರ ರೂ. ಬೆಲೆಯ, ಪರಮೇಶ ನಿಂಗಾಪುರ 16 ಸಾವಿರ ರೂ. ಬೆಲೆಯ, ಸುರೇಶ ಕೋರಿ 14 ಸಾವಿರ ರೂ. ಬೆಲೆಯ, ಮೇದೂರಿನ ಪ್ರಕಾಶ ಗೌಡಪ್ಪಳವರ 15 ಸಾವಿರ ರೂ. ಬೆಲೆಬಾಳುವ ಮೊಬೈಲ್​ಫೋನ್ ಕಳೆದುಕೊಂಡಿದ್ದಾರೆ. ಹೀಗೆಯೇ ಈ ಪಟ್ಟಿ ದೊಡ್ಡದಾಗುತ್ತ ಸಾಗುತ್ತದೆ.

ಕೂಡಲೆ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಬೇಕು. ಹಾಗೆಯೇ ಸಂತೆಯಲ್ಲಿ ಕಳ್ಳತನ ಪ್ರಕರಣ ನಡೆಯದಂತೆ ಭದ್ರತೆ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚೌಡಿ, ಬಾಳಂಬೀಡ ವೃತ್ತದಲ್ಲೂ: ಸದ್ಯದ ಶ್ರೀ ದುರ್ಗಾದೇವಿ ಸಂತೆ ಮೈದಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕರೊನಾ ಲಾಕ್​ಡೌನ್ ಆದಾಗಿನಿಂದಲೂ ಸಂತೆ ನಡೆಯುತ್ತಿಲ್ಲ. ಲಾಕ್​ಡೌನ್ ತಗೆದಾಗಿನಿಂದ ಪಟ್ಟಣದ ಚೌಡಿ ವೃತ್ತದ ಬಳಿ, ಬಾಳಂಬೀಡ ವೃತ್ತದ ಬಳಿ ಸಂತೆ ನಡೆಸಲಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಆಗಿ ಮತ್ತಷ್ಟು ತೊಂದರೆಯಾಗುತ್ತಿದ್ದು, ಇಲ್ಲಿಯೂ ಕೂಡ ಮೊಬೈಲ್ ಕಳ್ಳತನ ಪ್ರಕರಣಗಳು ನಡೆದೇ ಇವೆ. 20ರಿಂದ 30 ಜನರಿರುವ ಕಳ್ಳರು ತಂಡೋಪ ತಂಡವಾಗಿ ಆಗಮಿಸಿ ಮಿಂಚಿನಂತೆ ಗ್ರಾಹಕರ ಬೆಲೆಬಾಳುವ ಮೊಬೈಲ್​ಫೋನ್​ಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೊಬೈಲ್​ಫೋನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಠಾಣೆಯಲ್ಲಿ ದೂರು ದಾಖಲಾಗಿವೆ. ಪೊಲೀಸ್ ಸಿಬ್ಬಂದಿ ಕೊರತೆ ಇದ್ದು, ಈ ಪರಿಸ್ಥಿತಿಯಲ್ಲೂ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಕಳೆದ ಸೋಮವಾರ ಸಂತೆಯಲ್ಲಿ ಖುದ್ದು ನಾನೇ ಗಸ್ತು ತಿರುಗಿದ್ದೇನೆ. ಆದರೆ, ಯಾವೊಬ್ಬ ಕಳ್ಳರು ಗೋಚರಿಸಿಲ್ಲ. ಇನ್ನು ಮುಂದೆ ಸಂತೆಯಲ್ಲಿ ಇಬ್ಬರು ಸಿಬ್ಬಂದಿ ನೇಮಿಸಲಾಗುವುದು. ಕಳ್ಳರನ್ನು ಪತ್ತೆ ಹಚ್ಚಲು ಜಾಲ ಬೀಸಲಾಗಿದೆ.

| ದೀಪು ಎಂ.ಟಿ. ಪೊಲೀಸ್ ಸಬ್ ಇನ್​ಸ್ಪೆಕ್ಟರ್

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…