ಜಗಳೂರು: ಪ್ರತಿಭಟನಾ ನಿರತ ರೈತರನ್ನು ಬಂಧಿಸಿದ ಪೊಲೀಸರ ನಡೆ ಖಂಡಿಸಿ ಹಾಗೂ ಸಾಗುವಳಿ ಜಮೀನು ತೆರವುಗೊಳಿಸಿದ ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಸೋಮವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದಿಂದ ಪಾದಯಾತ್ರೆ ಮೂಲಕ ಆಗಮಿಸಿದ ರೈತರು, ಪಟ್ಟಣದ ಚಳ್ಳಕೆರೆ ಬೈಪಾಸ್ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರಲ್ಲದೆ, ತಾಲೂಕು ಕಚೇರಿ ಸಮೀಪದ ಬಿದರಕೆರೆ ರಸ್ತೆಯಲ್ಲಿ ಕುಳಿತು ಪೊಲೀಸರು, ಅರಣ್ಯ ಇಲಾಖೆ ವಿರುದ್ದ ಘೋಷಣೆ ಕೂಗಿದರು.
ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗೌಡಗೊಂಡನಹಳ್ಳಿ ಗ್ರಾಮದ 23 ಕುಟುಂಬಗಳು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಪರಿಶೀಲನಾ ಹಂತದಲ್ಲಿವೆ. ಜಿಲ್ಲಾಡಳಿತ ಈ ರೈತರ ರಕ್ಷಣೆಗೆ ಮುಂದಾಗಬೇಕು.
6 ಸಾವಿರಕ್ಕಿಂತ ಹೆಚ್ಚು ಬಗರ್‌ಹುಕುಂ ಸಾಗುವಳಿದಾರರು ಕಲಂ 53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ತಿರಸ್ಕಾರ ಮಾಡದೆ ಸಾಗುವಳಿ ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 70 ಸಾವಿರ ಅರಣ್ಯ ಭೂಮಿ ಅರ್ಜಿಗಳಿವೆ. ಫಾರಂ 52 ಮತ್ತು 57ರ 1ಲಕ್ಷ ಅರ್ಜಿಗಳಿವೆ.ಆದರೆ ಅಧಿಕಾರಿಗಳು ಇವುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಏಕಪಕ್ಷೀಯವಾಗಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದರು.
ಬಳ್ಳಾರಿಯ ವ್ಯಕ್ತಿಯೊಬ್ಬ ಮೈನಿಂಗ್ ಮಾಡುವವರಿಗೆ 29 ಎಕರೆಯಲ್ಲಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನೆಡುತೋಪು ಮಾಡುವ ಉದ್ದೇಶದಿಂದ ರೈತರಿಗೆ ಅನ್ಯಾಯ ಮಾಡಲು ಹೊರಟ್ಟಿದ್ದಾರೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಕಾನನಕಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ಜಮೀನು ತೆರವಿನಿಂದಾಗಿ ಬಡ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ. ಅವರಿಗೆ ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನೆ ಮಹೇಶ್, ತಾಲೂಕು ಅಧ್ಯಕ್ಷ ಚಿರಂಜೀವಿ, ಪ್ರಧಾನ ಕಾರ್ಯದರ್ಶಿ ಬೈರನಾಯಕನಹಳ್ಳಿ ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಬಳ್ಳಾರಿ ಜಿಲ್ಲಾಧ್ಯಕ್ಷ ದೇವೇಂದ್ರ ಕಳಂಗೆರೆ, ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ್ ಬಾಣಕರ್, ಮಡ್ರಳ್ಳಿ ತಿಪ್ಪೇಸ್ವಾಮಿ, ಹಸಿರು ಸೇನೆ ತಾಲೂಕು ಅಧ್ಯಕ್ಷ ಕಸವನಹಳ್ಳಿ ನಾಗರಾಜ್, ರಂಗಪ್ಪ, ಶರಣಪ್ಪ, ಹೊನ್ನೂರ್ ಅಲಿ, ರಂಗಜ್ಜ ಹನುಮಂತಾಪುರ ಮತ್ತಿತರರಿದ್ದರು.
ಸಿಎಂಗೆ ಕಪ್ಪುಪಟ್ಟಿ ಪ್ರದರ್ಶನ: ದಾವಣಗೆರೆ ಜಿಲ್ಲೆಯ ಯಾವುದೇ ಕಡೆ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಂಡರೆ ಅವರ ವಿರುದ್ಧ ರೈತ ಸಂಘದಿಂದ ಕಪ್ಪುಪಟ್ಟಿ ಪ್ರದರ್ಶನ ಹಾಗೂ ಸಚಿವರ ವಿರುದ್ಧ ಹೋರಾಟ ನಡೆಸಲಾಗುವುದು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈತರ ಭೂಮಿ ಬಿಟ್ಟುಕೊಡಲು ಆದೇಶಿಸಬೇಕು.
-ಹುಚ್ಚವ್ವನಹಳ್ಳಿ ಮಂಜುನಾಥ್, ರಾಜ್ಯಾಧ್ಯಕ್ಷ, ರೈತಸಂಘ.
ಮಾನವ ಹಕ್ಕುಗಳ ಆಯೋಗಕ್ಕೆ ದೂರು: ರೈತರ ಮೇಲೆ ದೌರ್ಜನ್ಯವೆಸಗಿ ಭೂಮಿ ಒತ್ತುವರಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇದಕ್ಕೆ ಸಹಕರಿಸಿದ ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ರೈತ ಮುಖಂಡರು ತಿಳಿಸಿದರು.