ರಸ್ತೆ ಕಾಮಗಾರಿ ಅವೈಜ್ಞಾನಿಕ, ಕಳಪೆ ಆರೋಪ

ಮಡಿಕೇರಿ: ಮಡಿಕೇರಿಯ ಮಹದೇವಪೇಟೆ ಸೇರಿ ವಿವಿಧ ಭಾಗಗಳಲ್ಲಿ ನಗರಸಭೆ ವತಿಯಿಂದ ಮಾಡಲಾಗುತ್ತಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಾಗಿದೆ ಎಂದು ಆರೋಪಿಸಿ ಎಸ್‌ಡಿಎಸಿಯು, ಮಾರ್ಕೆಟ್ ವ್ಯಾಪಾರಿ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೌರಾಯುಕ್ತರನ್ನು ಅಮಾನತುಗೊಳಿಸಬೇಕು. ಕಾಮಗಾರಿಯನ್ನು ಪರಿಶೀಲಿಸಿದ ತಾಂತ್ರಿಕ ಅಧಿಕಾರಿಯನ್ನು ಅಮಾನತು ಮಾಡಬೇಕು. 10 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ನಗರಸಭೆ ಮುಂಭಾಗ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ನಗರಸಭೆ ಮಾಜಿ ಸದಸ್ಯ ರಾಜೇಶ್ ಮಾತನಾಡಿ, ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ, ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. 10 ದಿನದೊಳಗಾಗಿ ಕಾಮಗಾರಿ ನಡೆಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಅಧ್ಯಕ್ಷ ಸುಲೈಮಾನ್ ಮಾತನಾಡಿ, ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿನ ಎಲ್ಲ ರಸ್ತೆಗಳು ಹದಗೆಟ್ಟಿದ್ದು, ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಹೀಗಿದ್ದರೂ ನಗರಸಭೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಗರಸಭೆ ಮುಂಭಾಗ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಇಂಜಿನಿಯರ್‌ಗಳು ಪ್ರತಿಭಟನಾ ಸ್ಥಳಕ್ಕಾಗಮಿಸಿ ಅಹವಾಲು ಸ್ವೀಕರಿಸಿದರು. ನಂತರ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಇದೇ ಸಂದರ್ಭ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಪೀಟರ್, ಅಮಿನ್ ಮೊಹಿಸಿನ್, ಮನ್ಸೂರ್ ಅಲಿ, ಪ್ರಮುಖರಾದ ಪ್ರಭು ರೈ, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಪ್ರತಿಭಟನೆಗೆ ಆಕ್ರೋಶ
ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕೆಲವಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಇಲ್ಲಿಯವರೆಗೆ ಈ ವಾರ್ಡ್‌ನ ಸದಸ್ಯರಾಗಿದ್ದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಅವಧಿಯಲ್ಲೇ ಕಾಮಗಾರಿಗಳು ನಡೆದಿದ್ದು ಅಂದು ಧ್ವನಿ ಎತ್ತದವರು ಇಂದು ಈ ರೀತಿ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಾಪಾರಿ ಎಂ.ಇ.ಫಾರುಕ್ ಅಸಮಾಧಾನ ವ್ಯಕ್ತಪಡಿಸಿದರು.
 

Leave a Reply

Your email address will not be published. Required fields are marked *