ಗುಡ್ಡ ಕುಸಿದು ಸಿಲುಕಿಕೊಂಡಿದ್ದ ಗೌಡ್ಲುಕುಡಿಗೆ ಗ್ರಾಮ ಏಳು ಜನರ ರಕ್ಷಣೆ

ನಂದೀಶ್ ಬಂಕೇನಹಳ್ಳಿ

ಬಣಕಲ್: ರಸ್ತೆಗೆ ಗುಡ್ಡ ಕುಸಿದು ಹೊರಬರಲಾಗದೆ ದುರ್ಗದಹಳ್ಳಿ ಸಮೀಪದ ಗೌಡ್ಲುಕುಡಿಗೆ ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಏಳು ಜನರನ್ನು ಜಾವಳಿ ಗ್ರಾಮದ ಯುವಕರ ತಂಡ ರಕ್ಷಿಸಿ ದುರ್ಗದಹಳ್ಳಿ ನೆರೆ ಪರಿಹಾರ ಕೇಂದ್ರಕ್ಕೆ ತಂದು ಬಿಟ್ಟಿದ್ದಾರೆ.

ರಸ್ತೆಗೆ ಗುಡ್ಡ ಕುಸಿದಿದ್ದರಿಂದ ಗೌಡ್ಲುಕುಡಿಯ ಏಳು ಮಂದಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದರು. ಮೊಬೈಲ್ ನೆಟ್​ವರ್ಕ್ ಸಿಗದಿರುವುದರಿಂದ ಅವರನ್ನು ಸಂರ್ಪಸಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಜಾವಳಿಯ ಬಿಎಸ್​ಎನ್​ಎಲ್ ಟವರ್ ಸರಿಪಡಿಸಿದ್ದರಿಂದ ಗೌಡ್ಲುಕುಡಿಗೆ ಗ್ರಾಮದಲ್ಲಿ ಸಿಲುಕಿದವರು ಮೊಬೈಲ್ ಮೂಲಕ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಗ್ರಾಮದಲ್ಲಿ ಸಿಲುಕಿದ್ದ ರಾಧಾ,ನೀಲಮ್ಮ, ಜಾನಕಿ, ವೀರಪ್ಪ, ಲಕ್ಷ್ಮಣ, ತಿಮ್ಮಯ್ಯ, ಮಂಜೇಗೌಡ ಅವರನ್ನು ಜಾವಳಿಯ 50ಕ್ಕೂ ಹೆಚ್ಚು ಯುವಕರ ತಂಡ ಹೊತ್ತುಕೊಂಡು ನದಿಯಂತೆ ಹರಿಯುತ್ತಿದ್ದ ಹಳ್ಳವನ್ನು ದಾಟಿ ದುರ್ಗದಹಳ್ಳಿಯ ನೆರೆ ಪರಿಹಾರ ಕೇಂದ್ರಕ್ಕೆ ತಂದು ಸೇರಿಸಿದ್ದಾರೆ.

ಅಂಗನವಾಡಿ ಕೇಂದ್ರ ಆರಂಭ: ಕೊಟ್ಟಿಗೆಹಾರದ ನೆರೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಕ್ಕಳಿಗಾಗಿ ಬುಧವಾರ ಅಂಗನವಾಡಿ ಕೇಂದ್ರ ಆರಂಭಿಸಲಾಗಿದೆ. ಕೊಟ್ಟಿಗೆಹಾರ ನೆರೆ ಪರಿಹಾರ ಕೇಂದ್ರದಲ್ಲಿರುವ 20ಕ್ಕೂ ಹೆಚ್ಚು ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಪ್ರತ್ಯೇಕ ಕೊಠಡಿಯಲ್ಲಿ ಮಕ್ಕಳಿಗೆ ಪಾಠ, ಹಾಡು, ಆಟ, ನೃತ್ಯಗಳನ್ನು ಹೇಳಿಕೊಡುತ್ತಿದ್ದಾರೆ. ನೆರೆ ಪರಿಹಾರ ಕೇಂದ್ರದಲ್ಲಿ ಮಕ್ಕಳ ಹಾಡಿನ ಆಟ ಪಾಠದ ಸದ್ದು ಮನೆಮಾಡಿದೆ.

ಸಂಚಾರಿ ಎಟಿಎಂ ಸೇವೆ : ಬಣಕಲ್ ಹೊರತು ಪಡಿಸಿದರೆ ನೆರೆ ಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳಾದ ಆಲೇಖಾನ್, ಚನ್ನಡ್ಲು, ದುರ್ಗದಹಳ್ಳಿ, ಮದುಗುಂಡಿ, ಮಲೆಮನೆ ಸುತ್ತಮುತ್ತ ಎಟಿಎಂ ಇಲ್ಲದೆ ತುರ್ತು ಹಣಕ್ಕಾಗಿ ಪರದಾಡುವಂತಾಗಿತ್ತು. ಈ ಭಾಗದ ಸಾರ್ವಜನಿಕರು ಮತ್ತು ನಿರಾಶ್ರಿತರಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಂಚಾರಿ ವಾಹನ ನೆರೆ ಹಾವಳಿ ಪ್ರದೇಶಗಳಲ್ಲಿ ಸೇವೆ ನೀಡುತ್ತಿದೆ. ನಿರಾಶ್ರಿತರು ಇದರ ಅನುಕೂಲ ಪಡೆದುಕೊಂಡರು.

ವಾಕಿಟಾಕಿಯಾದ ವಾಟ್ಸ್​ಆಪ್ ಗ್ರೂಪ್: ನೆರೆ ಹಾವಳಿಗೆ ತುತ್ತಾದ ಆಲೇಖಾನ್, ಚನ್ನಡ್ಲು, ದುರ್ಗದಹಳ್ಳಿ, ಮದುಗುಂಡಿ, ಮಲೆಮನೆ ಸುತ್ತಮುತ್ತಲಿನ ಪ್ರದೇಶಗಳಿಗೆ ಮಲೆನಾಡಿನ ಸುಮಾರು 50 ಯುವಕರ ತಂಡ ಸ್ವಯಂಪ್ರೇರಿತರಾಗಿ ನೆರವಿಗೆ ಮುಂದಾಗಿದ್ದಾರೆ. ಚಿಕ್ಕಮಗಳೂರಿನ ನಮ್ಮುಡ್ಗುರು ವಾಟ್ಸ್ ಆಪ್ ತಂಡದ ಸದಸ್ಯರು ತಮ್ಮ ವಾಟ್ಸ್ ಆಪ್ ಗ್ರೂಪನ್ನು ವಾಕಿಟಾಕಿಯಂತೆ ಬಳಸಿ ಧ್ವನಿ ಸಂದೇಶ ಕಳಿಸುವ ಮೂಲಕ ಯಾವ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಯಾವ ರಸ್ತೆಗೆ ಮರ ಬಿದ್ದಿದೆ. ಎಲ್ಲಿಗೆ ಜೇಸಿಬಿ ಕಳಿಸಬೇಕು, ಎಲ್ಲಿಗೆ ಕಟ್ಟಿಂಗ್ ಮಿಷನ್ ಕಳಿಸಬೇಕು. ಎಲ್ಲಿಗೆ ಆಹಾರದ ಪ್ಯಾಕೇಟ್ ಕಳಿಸಬೇಕು ಎಂಬ ಆಡಿಯೋ ಸಂದೇಶಗಳನ್ನು ಕಳಿಸಿ ಅಗತ್ಯ ಮಸ್ತುಗಳನ್ನು ತಲುಪಿಸಿ ಸಂತ್ರಸ್ತರಿಗೆ ನೆರವಾಗಿದ್ದಾರೆ.

ಮೊಬೈಲ್ ನೆಟ್​ವರ್ಕ್ ಸಿಗದ ನೆರೆ ಹಾವಳಿ ಪ್ರದೇಶಗಳಲ್ಲಿ ಖಾಸಗಿ ಮೊಬೈಲ್ ಟವರ್​ಗಳ ಬಳಿ ಜನರೇಟರ್​ಗಳನ್ನು ತಂದು ಟವರ್ ಕಾರ್ಯ ನಿರ್ವಹಿಸುವಂತೆ ಮಾಡಿ ಸ್ವಂತ ವಾಹನದಲ್ಲಿ ನೂರಾರು ಕಿಮೀ ಸುತ್ತಾಡುವ ಯುವಕರ ಪಡೆ ನಿರಾಶ್ರಿತರನ್ನು ರಕ್ಷಿಸಿ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ನಿಬ್ಬೆರಗಾಗುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *