ಮೇ ಅಂತ್ಯಕ್ಕೆ ಮುಳ್ಳಯ್ಯನಗಿರಿ ಸಂಚಾರ ಸುಗಮ

ಚಿಕ್ಕಮಗಳೂರು: ಪ್ರವಾಸಿ ತಾಣ, ಇತಿಹಾಸ ಪ್ರಸಿದ್ಧ ಮುಳ್ಳಯ್ಯನಗಿರಿ ಪರ್ವತಶ್ರೇಣಿಯನ್ನು ಕಣ್ತುಂಬಿಕೊಳ್ಳಲು ನಾಲ್ಕು ವರ್ಷಗಳಿಂದ ರಸ್ತೆ ಸರಿ ಇಲ್ಲದೆ ಪರಿತಪಿಸುತ್ತಿದ್ದ ಪ್ರವಾಸಿಗರಿಗೀಗ ಸುಗಮವಾಗಿ ಸಾಗಲು ಸುಸಜ್ಜಿತ ರಸ್ತೆ ನಿರ್ವಿುಸಲಾಗಿದೆ.

ಕೈಮರದಿಂದ ಮುಂದೆ ಸಾಗಿ ದತ್ತಪೀಠ ಮುಖ್ಯರಸ್ತೆಯಿಂದ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿಗೆ ಸಾಗುವ ರಸ್ತೆ ಅಗಲ ಕಿರಿದಾಗಿರುವುದರ ಜತೆಗೆ ಗುಂಡಿ ಗೊಟರುಗಳಿಂದ ಕೂಡಿತ್ತು. ಮೂರು ವರ್ಷದಿಂದಲೂ ಇಲ್ಲಿಗೆ ಬರುವ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡೇ ತೆರಳುತ್ತಿದ್ದರು.

ಅಲ್ಲದೇ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿಗೆ ತೆರಳುವ ರಸ್ತೆಯಂತೂ ಸಾಮಾನ್ಯ ಚಾಲಕನಿರಲಿ, ನುರಿತ ಚಾಲಕರೂ ವಾಹನ ಓಡಿಸಬೇಕಾದರೆ ಹಿಂಭಾಗ ಕುಳಿತ ಪ್ರವಾಸಿಗರು ಜೀವ ಬಿಗಿ ಹಿಡಿದುಕೊಂಡಿರಬೇಕಿತ್ತು. ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿವರೆಗೂ ಪ್ರವಾಸೋದ್ಯಮ ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತ ರಸ್ತೆ ನಿರ್ವಿುಸಿ ಎರಡು ವಾಹನಗಳು ಸುಲಲಿತವಾಗಿ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ. ರಸ್ತೆಯ ಅಂಚಿಗೆ ಕಬ್ಬಿಣದ ತಡೆಬೀಲಿ ನಿರ್ವಿುಸಿ ಸುರಕ್ಷಿತಗೊಳಿಸಲಾಗಿದೆ.

ಈ ಪ್ರದೇಶದ ರ್ಪಾಂಗ್ ಸ್ಥಳದಲ್ಲಿ ವಾಚ್ ಟವರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸೀತಾಳಯ್ಯನಗಿರಿಯಿಂದ ದತ್ತಪೀಠದ ಮುಖ್ಯರಸ್ತೆವರೆಗೂ ಬಜೆಟ್​ನಲ್ಲಿ ಕಾಯ್ದಿರಿಸಿದ್ದ 3 ಕೋಟಿ ರೂ. ವಿನಿಯೋಗಿಸಿ ಅಚ್ಚುಕಟ್ಟಾದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಮುಳ್ಳಯ್ಯನಗಿರಿಯಿಂದ ದತ್ತಪೀಠದ ಮುಖ್ಯರಸ್ತೆವರೆಗಿನ ರಸ್ತೆ ಸಂಪೂರ್ಣ ಇಳಿಜಾರು ಪ್ರದೇಶವಾದ್ದರಿಂದ ಪ್ರವಾಸಿಗರು ಮೈಮರೆಯದೆ ವಾಹನ ಚಲಾಯಿಸುವ ಅಗತ್ಯವಿದೆ. ಈ ಪ್ರದೇಶದ ಸುತ್ತಮುತ್ತಲೂ ಗಿರಿಶಿಖರಗಳ ಸೊಬಗು ವೀಕ್ಷಿಸಲು ಅಲ್ಲಲ್ಲಿ ವೀಕ್ಷಣಾ ಸ್ಥಳಗಳು ಇದ್ದು, ಆ ಜಾಗದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿಕೊಂಡು ಅಲ್ಲಿನ ರಮ್ಯತಾಣಗಳನ್ನು ಸವಿದ ನಂತರ ಪ್ರವಾಸಿಗರು ಮುಂದೆ ಸಾಗಿದರೆ ಅವರಿಗೂ ಸುರಕ್ಷಿತ.

ಸದ್ಯ ಸ್ವಂತ ವಾಹನ ಸಂಚಾರ ನಿರ್ಬಂಧ: ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ರಸ್ತೆ ಇದ್ದ ಸ್ಥಳದಲ್ಲೇ ಅಚ್ಚುಕಟ್ಟಾಗಿ ಡಾಂಬರೀಕರಣ ಮಾಡಿ ಕಂದಕ ಇರುವ ಕಡೆಗಳಲ್ಲಿ ರಸ್ತೆ ಬದಿ ಅವಶ್ಯಕತೆಗೆ ಅನುಗುಣವಾಗಿ ಕಬ್ಬಿಣದ ಕಬ್ಬಿಣದ ತಡೆಬೇಲಿ(ಕ್ರ್ಯಾಶ್ ಬ್ಯಾರಿಯರ್) ಅಳವಡಿಸಲಾಗಿದೆ ಎಂದು ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಸವರಾಜ್ ತಿಳಿಸಿದ್ದಾರೆ.

ಮುಳ್ಳಯ್ಯನಗಿರಿಯಿಂದ ಸೀತಾಳಯ್ಯನಗಿರಿ ಮತ್ತು ದತ್ತಪೀಠದ ಮುಖ್ಯರಸ್ತೆಯ ಅರ್ಧಭಾಗದವರೆಗೂ ಈಗಾಗಲೇ ರಸ್ತೆ ಅಭಿವೃದ್ಧಿ ಕಾರ್ಯ ಮುಗಿದಿದ್ದು, ರಸ್ತೆ ಮತ್ತು ತಡೆಗೋಡೆಗಳಿಗೆ ಪೈಂಟಿಂಗ್ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ಬಹುತೇಕ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಮಳೆಗಾಲ ಆರಂಭವಾಗುವ ಮುನ್ನ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಹಾದಿ ನಿರ್ವಿುಸಲಾಗುತ್ತಿದೆ ಎಂದು ತಿಳಿಸಿದರು.

ಕಾಮಗಾರಿ ಪೂರ್ಣಗೊಳ್ಳುವವರೆಗೂ ಈ ರಸ್ತೆಯಲ್ಲಿ ಪ್ರವಾಸಿಗರ ಸ್ವಂತ ವಾಹನಕ್ಕೆ ಸಂಚಾರ ನಿರ್ಬಂಧಿಸಲಾಗಿದ್ದು, ಜೀಪ್​ಗಳು ಮಾತ್ರ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ವಿದೇಶ, ಹೊರ ರಾಜ್ಯ ಹಾಗೂ ಅನ್ಯಜಿಲ್ಲೆಗಳಿಂದ ಪ್ರವಾಸಿಗರು ಈ ಸ್ಥಳಗಳಿಗೆ ಆಗಮಿಸುವುದರಿಂದ ಅವರ ಅನುಕೂಲಕ್ಕಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ಮಾತ್ರ ಇಲ್ಲಿ ಸಂಚಾರ ಮುಕ್ತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕಂದಕಕ್ಕೆ ಉರುಳಿದ್ದ ವಾಹನಗಳು: ಹತ್ತು ವರ್ಷಗಳ ಹಿಂದೆ ಅಭಿವೃದ್ಧಿ ಕಂಡಿದ್ದ ರಸ್ತೆ ನಂತರದಲ್ಲಿ ರಸ್ತೆ ಹಾಳಾಗಿ ಸುರಕ್ಷತೆ ಇಲ್ಲದೆ ಲಾರಿ ಪ್ರಪಾತಕ್ಕೆ ಉರುಳಿ ಚಾಲಕ ಮೃತಪಟ್ಟಿದ್ದಲ್ಲದೆ, ಹಲವು ಪ್ರವಾಸಿ ವಾಹನಗಳು ಕಂದಕಕ್ಕೆ ಉರುಳಿರುವ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಈಗ ಸಂಚಾರಕ್ಕೆ ಹಾದಿ ಸುಗಮವಾಗಿದೆ.