ಇಳಕಲ್ಲದಲ್ಲಿ ರಸ್ತೆ ಕಾಮಗಾರಿ ಸ್ಥಗಿತ

ಇಳಕಲ್ಲ: ನಗರಸಭೆಯಿಂದ ನಗರೋತ್ಥಾನ ಯೋಜನೆಯಡಿ ಸ್ಥಳೀಯ ನಗರಸಭೆ ಹಿಂಭಾಗದಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಮಾಡುತ್ತಿರುವುದನ್ನು ನಿಲ್ಲಿಸಿ ವೈಜ್ಞಾನಿಕ ಕಾಮಗಾರಿ ಮಾಡಬೇಕೆಂದು ಒತ್ತಾಯಿಸಿ ಶನಿವಾರ ಸಾರ್ವಜನಿಕರು ಪ್ರತಿಭಟಿಸಿ ಕೆಲಸ ಬಂದ್ ಮಾಡಿಸಿದರು.

ರಸ್ತೆ ಮೇಲೆ ಬಿದ್ದ ನೀರು ಮುಂದಕ್ಕೆ ಹೋಗದೇ ಇರುವಂತೆ ನಿರ್ವಿುಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತದೆ. ವೈಜ್ಞಾನಿಕವಾಗಿ ಕಾಮಗಾರಿ ಮಾಡಬೇಕು, ಇಲ್ಲವೇ ಕಾಮಗಾರಿ ನಿಲ್ಲಿಸಿ ಎಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿ ಕೆಲಸ ಬಂದು ಮಾಡುವಂತೆ ಅಲ್ಲಿನ ನಿವಾಸಿಗಳು ಒತ್ತಾಯಿಸಿದರು.

ಸ್ಥಳದಲ್ಲಿದ್ದ ಇಳಕಲ್ಲ ನಗರಾಭಿವೃದ್ಧಿ ಹೋರಾಟ ಸಮಿತಿ ಸದಸ್ಯ ಸುಲೇಮಾನ ಚೋಪದಾರ ಅವರು ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಜತೆ ದೂರವಾಣಿ ಮೂಲಕ ಮಾತನಾಡಿ, ರಸ್ತೆ ಕಾಮಗಾರಿ ಮಾಡಿದರೆ ನಿವಾಸಿಗಳಿಗೆ ಅನುಕೂಲವಾಗಬೇಕು. ಈ ಕುರಿತು ಇಲ್ಲಿನ ನಿವಾಸಿಗಳೊಂದಿಗೆ ರ್ಚಚಿಸಿ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿ ಕೈಗೊಳ್ಳಲು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ತಾವೇ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.