ಸಕಲೇಶಪುರ: ಕಳಪೆ ಕಾಮಗಾರಿಯಿಂದಾಗಿ ತಡೆಹಿಡಿಯಲಾಗಿರುವ ಬಿಲ್ ಪಡೆಯಲು ಗುತ್ತಿಗೆದಾರ ಕಾಮಗಾರಿಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪುರಸಭೆ ಕಚೇರಿ ಮುಂಭಾಗ ಹಾಗೂ ತಾಲೂಕು ಪಂಚಾಯಿತಿ ರಸ್ತೆಯ ಬಾಕಿ ಉಳಿದಿದ್ದ ಕಾಮಗಾರಿ ನಡೆಸಲು ಕಳೆದ ಆರು ತಿಂಗಳ ಹಿಂದೆ ಪರುಸಭೆ 21 ಲಕ್ಷ ರೂ.ಗಳಿಗೆ ಟೆಂಡರ್ ಕರೆದಿದ್ದು ಟೆಂಡರ್ ಪಡೆದ ವ್ಯಕ್ತಿ ಕಳೆದ ಎರಡು ತಿಂಗಳ ಹಿಂದೆ ಕಾಮಗಾರಿ ನಡೆಸಿದ್ದಾರೆ. ಆದರೆ, ಕಾಮಗಾರಿ ನಡೆದ ಒಂದೇ ವಾರಕ್ಕೆ ಕಳಪೆ ಕಾಮಗಾರಿ ಎಂಬ ಆರೋಪ ಕೇಳಿಬಂದಿದ್ದು, ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಧೂಳಿನ ರೀತಿಯಲ್ಲಿ ಕಿತ್ತುಬರುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಕಾಮಗಾರಿ ನಡೆದ ತಿಂಗಳ ಒಳಗಾಗಿ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿದ್ದರಿಂದ ಗುತ್ತಿಗೆದಾರರಿಗೆ ಬಿಲ್ ಸಂದಾಯ ಮಾಡದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು. ಪರಿಣಾಮ ಗುಂಡಿಗಳು ಬಿದ್ದಿರುವ ಭಾಗವನ್ನು ಸರಿ ಮಾಡುವಂತೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಪರಿಣಾಮ ಮೂರು ತಿಂಗಳ ಹಿಂದೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಕಿತ್ತು ತೇಪೆ ಹಾಕುವ ಕೆಲಸ ನಡೆಯುತ್ತಿದೆ. ಆದರೆ, ಕಾಂಕ್ರೀಟ್ ರಸ್ತೆಯನ್ನು ಮಧ್ಯದಲ್ಲಿ ಕಿತ್ತು ಮರು ನಿರ್ಮಾಣ ಮಾಡಿದರೆ ನೈಜತೆ ಬರಲಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.