ಹದಗೆಟ್ಟ ಬೋಳ ಪಾಲಿಂಗೇರಿ ರಸ್ತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಇಟ್ಟಮೇರಿಬೋಳ ಮಾರ್ಗವಾಗಿ ಸಚ್ಚೇರಿಪೇಟೆ ಕಡೆಗೆ ಸಾಗುವ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗುಂಡಿಗಳು ನಿರ್ಮಾಣಗೊಂಡಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಯ ಹೊಂಡಗಳನ್ನು ಮುಚ್ಚಿ ದುರಸ್ತಿ ಪಡಿಸಲು ಗುತ್ತಿಗೆದಾರ ಮುಂದಾಗದಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ತರಿಸಿದೆ. ಬೋಳದಿಂದ ಸಚ್ಚೇರಿಪೇಟೆವರೆಗೂ ರಸ್ತೆ ಮಧ್ಯಭಾಗದಲ್ಲಿ ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡ ಪರಿಣಾಮ ಹೊಂಡದ ಅರಿವಿಲ್ಲದ ಸವಾರರು ನಿತ್ಯ ಬಿದ್ದು ಎಡವಟ್ಟು ಮಾಡಿಕೊಳ್ಳುವಂತಾಗಿದೆ.

ಸೇತುವೆ ಬಳಿ ಕಿತ್ತು ಹೋದ ರಸ್ತೆ : ಇಲ್ಲಿನ ಬೋಳ ಪಾಲಿಂಗೇರಿ ಕಿರು ಸೇತುವೆ ಸಮೀಪ ರಸ್ತೆ ತೀರ ಹದಗೆಟ್ಟಿದ್ದು ಬೃಹತ್ ಹೊಂಡಗಳು ನಿರ್ಮಾಣಗೊಂಡಿವೆ. ವೇಗವಾಗಿ ಬರುವ ವಾಹನ ಸವಾರರು ತಿರು ರಸ್ತೆಯ ಬಳಿ ಇರುವ ಸೇತುವೆ ಸಮೀಪ ಹದಗೆಟ್ಟ ರಸ್ತೆಯಿಂದ ನಿರಂತರ ಬಿದ್ದು ಏಳುವ ಪ್ರಸಂಗಗಳು ಹೆಚ್ಚಾಗುತ್ತಿದೆ. ಕಳೆದ ನಾಲ್ಕು ವರ್ಷ ಹಿಂದೆ ನಿರ್ಮಾಣಗೊಂಡ ಈ ರಸ್ತೆ ನಿರ್ವಹಣೆ ಇಲ್ಲಿವರೆಗೂ ನಡೆದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪಾಲಿಂಗೇರಿ ಸೇತುವೆ ಸಮೀಪ ರಸ್ತೆಯೂ ತೀರ ಹದಗೆಟ್ಟಿದ್ದು ಹೊಂಡಗಳು ನಿರ್ಮಾಣವಾಗಿ ರಸ್ತೆಯ ಜಲ್ಲಿ ಟಾರು ಎಲ್ಲವೂ ಎದ್ದುಹೋಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಾಗಿದ್ದರೂ, ಅಧಿಕಾರಿಗಳು- ಗುತ್ತಿಗೆದಾರರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಗುತ್ತಿಗೆದಾರ ತಕ್ಷಣ ಈ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಸ್ತೆಯು ಸೇತುವೆ ಸಮೀಪ ತೀರ ಹದಗೆಟ್ಟಿದ್ದು ಹೊಸದಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಮಂದಿ ಇಲ್ಲಿ ನಿತ್ಯ ಎಡವಟ್ಟು ಮಾಡಿಕೊಳ್ಳುವಂತಾಗಿದೆ. ಕೂಡಲೇ ರಸ್ತೆ ಹೊಂಡವನ್ನು ಮುಚ್ಚುವ ಕಾರ್ಯ ನಡೆಯಬೇಕಾಗಿದೆ.
 ಪ್ರವೀಣ್ , ಗ್ರಾಮಸ್ಥ.

ಸೇತುವೆ ಸಮೀಪ ರಸ್ತೆಯಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನ ಸಂಚಾರಕ್ಕೆ ತುಂಬಾನೇ ಕಷ್ಟಕರವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
 ಪ್ರೇಮಶ್ರೀ, ಸ್ಥಳೀಯರು.

ನಾಲ್ಕು ವರ್ಷದ ಹಿಂದೆ ನಿರ್ಮಾಣಗೊಂಡ ರಸ್ತೆಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣದ ಪರಿಹಾರವಾಗಿ ಗುತ್ತಿಗೆದಾರನಿಂದ ರಸ್ತೆ ಹೊಂಡ ಮುಚ್ಚಿಸಲಾಗುವುದು.
 ಸತೀಶ್ ಪೂಜಾರಿ , ಬೋಳ ಗ್ರಾ,ಪಂ ಅಧ್ಯಕ್ಷ.

Leave a Reply

Your email address will not be published. Required fields are marked *