ಮೂರೇ ತಿಂಗಳಲ್ಲಿ 300 ಗುಂಡಿ!

ಶ್ರೀಪತಿ ಹೆಗಡೆ ಹಕ್ಲಾಡಿ ನಾಡಾ
ರಸ್ತೆಗಾಗಿ ಇಡೀ ಊರಿಗೆ ಊರೇ ಪ್ರತಿಭಟನೆ ನಡೆಸಿತ್ತು. ಹೋರಾಟಕ್ಕೆ ಮಣಿದು ಮೂರು ತಿಂಗಳ ಹಿಂದೆ ಹೊಸ ರಸ್ತೆ ನಿರ್ಮಿಸಿದಾಗ ಸ್ಥಳೀಯರು ಹಿರಿಹಿರಿ ಹಿಗ್ಗಿದ್ದರು. ಆದರೆ ಜನರ ಈ ಖುಷಿ ಹೆಚ್ಚು ದಿನ ಉಳಿಯಲೇ ಇಲ್ಲ. ನೂತನ ರಸ್ತೆ ನಿರ್ಮಾಣವಾಗಿ ಮೂರೇ ತಿಂಗಳಲ್ಲಿ ರಸ್ತೆಯುದ್ದಕ್ಕೂ 300ಕ್ಕೂ ಹೆಚ್ಚು ಗುಂಡಿಗಳು ಸೃಷ್ಟಿಯಾಗಿವೆ.

ಮೂರು ತಿಂಗಳ ಹಿಂದಷ್ಟೇ ಡಾಂಬರು ಕಂಡಿದ್ದ ನಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆ ಹೋಟೆಲ್ -ಕೋಣ್ಕಿ ರಸ್ತೆ ಪ್ರಸ್ತುತ ಸಂಪೂರ್ಣ ಹಾನಿಗೀಡಾಗಿದೆ. ಗುಡ್ಡೆ ಹೋಟೆಲ್‌ನಿಂದ ಕೋಣ್ಕಿ ಜಂಕ್ಷನ್‌ವರೆಗಿನ ರಸ್ತೆ ಒಬ್ಬರು ಮಾಡಿದ್ದರೆ, ಅಲ್ಲಿಂದ ಬಡಾಕೆರೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತೊಬ್ಬ ಗುತ್ತಿಗೆದಾರರು ನಿರ್ಮಿಸಿದ್ದಾರೆ. ಪ್ರಸಕ್ತ ಹದಗೆಟ್ಟ ರಸ್ತೆಗೆ ಪ್ರಕೃತಿ ವಿಕೋಪದ ಲೇಬಲ್ ಅಂಟಿಸುವ ಕೆಲಸ ನಡೆಯುತ್ತಿದೆ.
ನಾಡಾ ಗುಡ್ಡೆ ಹೋಟೆಲ್‌ನಿಂದ ಕೋಣ್ಕಿವರೆಗಿನ 3 ಕಿ.ಮೀ. ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದರೆ, ಕೋಣ್ಕೆಯಿಂದ ಬಡಾಕೆರೆ ಸಂಪರ್ಕ ರಸ್ತೆ ಉತ್ತಮವಾಗಿಯೇ ಇದೆ.

ಕಳಪೆಗೆ ಬೋರ್ಡ್ ಸಾಕ್ಷಿ
ಗುಡ್ಡೆ ಹೋಟೆಲ್ ಕೋಣ್ಕಿ ಕಳಪೆ ಕಾಮಗಾರಿಗೆ ಯಾವ ಇಂಜಿನಿಯರ್‌ನ ಸರ್ಟಿಫಿಕೆಟ್ ಕೂಡ ಬೇಕಾಗಿಲ್ಲ. ರಸ್ತೆ ನಿರ್ಮಾಣದ ಮಾಹಿತಿ ಫಲಕ ನೋಡಿದರೆ ಸಾಕು, ಹಣೆಬರಹ ತಿಳಿಯುತ್ತದೆ. ಎರಡು ಸಿಮೆಂಟ್ ಕಂಬ ನೆಟ್ಟು ಅದಕ್ಕೆ ಅಡ್ಡಪಟ್ಟಿ ಜೋಡಿಸಿ, ಬಣ್ಣ ಬಳಿದು ಅದರ ಮೇಲೆ ಕಪ್ಪು ಬಣ್ಣದಲ್ಲಿ ಅಕ್ಷರ ಕೊರೆಯಲಾಗಿದೆ. ನೂತನ ರಸ್ತೆ ಮೂರೇ ತಿಂಗಳಿಗೆ ಹೇಗೆ ಹೊಂಡ ಬಿದ್ದಿದೆಯೋ ಹಾಗೆಯೇ ಬೋರ್ಡ್ ಅಕ್ಷರಗಳು ಎದ್ದು ಹೋಗಿ ಮಾಹಿತಿ ಸಿಗುವುದೇ ಕಷ್ಟ. ಶಾಸಕರ 50 ಲಕ್ಷ ರೂ. ಅನುದಾನದಲ್ಲಿ ಜಿಪಂ ಇಂಜಿನಿಯರಿಂಗ್ ವಿಭಾಗ ಈ ಕಾಮಗಾರಿ ಕೈಗೊಂಡಿದೆ. ಹಳೇ ರಸ್ತೆ ಕಿತ್ತು ಹೊಸದಾಗಿ ಜಲ್ಲಿ ಕೂರಿಸಿ, ಅದರ ಮೇಲೆ ಒಂದು ಡಾಂಬರ್ ಜಲ್ಲಿ ಸುರಿದು ರೋಲರ್ ಓಡಿಸಲಾಗಿದೆ. ಆರಂಭದಲ್ಲೇ ರಸ್ತೆ ಕಾಮಗಾರಿ ಕಳಪೆ ಕುರಿತು ಸ್ಥಳೀಯರು ಗಮನ ಸೆಳೆದಿದ್ದರೂ ಜಿಪಂ ಇಂಜಿನಿಯರ್ ಅದನ್ನು ನಿರ್ಲಕ್ಷಿಸಿದ್ದರು.

ಹೊಸ ರಸ್ತೆ ಆಯ್ತು ಎಂದು ಖುಷಿ ಪಡಬೇಕೋ ರಸ್ತೆ ಹದಗೆಟ್ಟ ಬಗ್ಗೆ ಅಳಬೇಕೋ ಗೊತ್ತಾಗುತ್ತಿಲ್ಲ. ನಮ್ಮೂರ ರಸ್ತೆ ಹಾಳಾಗಿ ಬಡಾಕೆರೆಗೆ ಬರುವ ಸರ್ವೀಸ್ ಬಸ್ ಟ್ರಿಪ್ ಕೂಡ ನಿಲ್ಲಿಸಲಾಗಿತ್ತು. ಆಟೋದವರು ಬಾಡಿಗೆ ಬರಲು ಹಿಂದೇಟು ಹಾಕುತ್ತಿದ್ದರು. ರಸ್ತೆ ನವೀಕರಿಸುವಂತೆ ಧರಣಿ, ಪ್ರತಿಭಟನೆ ಕೂಡ ಮಾಡಲಾಗಿತ್ತು. ಕೊನೆಗೂ ಅನುದಾನ ಮಂಜೂರಾಗಿ ರಸ್ತೆ ಕೂಡ ಆಯಿತು. ರಸ್ತೆ ಆಗಿ ಮೂರು ತಿಂಗಳಲ್ಲೇ ಹೊಂಡ ಬಿದ್ದಿದೆ. ಹಾಳಾದ ರಸ್ತೆ ಪ್ಯಾಚ್‌ವರ್ಕ್ ಮಾಡಿದರೆ ಸಾಲದು, ಹೊಸದಾಗಿ ನಿರ್ಮಿಸಿಕೊಡಬೇಕು.
ಸುಕೇಶ್, ಕೋಣ್ಕಿ ಪರಿಸರ ನಿವಾಸಿ

ಮೂರು ತಿಂಗಳ ಹಿಂದಷ್ಟೇ ಡಾಂಬರು ಕಂಡ ರಸ್ತೆ ಪ್ರಸಕ್ತ ಸಂಪೂರ್ಣ ಹದಗೆಟ್ಟಿದೆ. ನೂರಾರು ಮನೆಗೆ ಹತ್ತಾರು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಇಂಥ ಪರಿಸ್ಥಿತಿ ಬರಬಾರದಿತ್ತು. ರಸ್ತೆ ಸಂಪೂರ್ಣ ನವೀಕರಿಸಿ ಕೊಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ.
ರವಿ ಶೆಟ್ಟಿ, ಕೋಣ್ಕಿ

ಗುಡ್ಡೆ ಹೋಟೆಲ್ ಕೋಣ್ಕಿ ರಸ್ತೆ ಸ್ಥಿತಿಗತಿ ಬಗ್ಗೆ ಸ್ಥಳೀಯರು ಗಮನಕ್ಕೆ ತಂದಿದ್ದು, ಸ್ವತಃ ಪರಿಶೀಲನೆ ಮಾಡಿದ್ದೇನೆ. ರಸ್ತೆ ಹದಗೆಟ್ಟಿರುವ ಬಗ್ಗೆ ಜಿಪಂ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರಸ್ತೆ ನವೀಕರಣ ಮಾಡುವಂತೆ ತಾಕೀತು ಮಾಡಿದ್ದೇನೆ. ಪ್ಯಾಚ್ ವರ್ಕ್ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಕಳಪೆ ಕಾಮಗಾರಿಗೆ ಯಾವತ್ತೂ ಅವಕಾಶ ನೀಡುವುದಿಲ್ಲ. ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ.
ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು.

Leave a Reply

Your email address will not be published. Required fields are marked *