ಮಳೆಗಾಲದಲ್ಲಿ ತೋಡು, ಬೇಸಿಗೆಯಲ್ಲಿ ರೋಡು!

ಪ್ರವೀಣ್‌ರಾಜ್ ಕೊಲ ಕಡಬ
ಮಳೆಗಾಲದಲ್ಲಿ ತೋಡು… ಬೇಸಿಗೆಯಲ್ಲಿ ರೋಡು… ಇದು ಬೆಳಂದೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸವಣೂರು ಗ್ರಾಮ ಪಂಚಾಯಿತಿಗೊಳಪಟ್ಟ ಪಾಲ್ತಾಡಿ ಗ್ರಾಮದ ಪರಣೆಯಿಂದ ಬಂಬಿಲ ಬೈಲು ಪ್ರದೇಶಗಳಿಗೆ ಹೋಗುವ ಸಂಪರ್ಕ ರಸ್ತೆಯ ಸ್ಥಿತಿ.

ಪರಣೆಯಿಂದ ಮೀನಕೊಳೆಂಜಿ, ಜಾರಿಗೆತ್ತಡಿ, ಚಾಕೊಟೆತ್ತಡಿ ಸೇರಿದಂತೆ ಬಂಬಿಲಬೈಲು ಪ್ರದೇಶಗಳಿಗೆ ಹೋಗುವ ಜನರ ಹಲವು ದಶಕಗಳ ಸಮಸ್ಯೆ. ಈ ರಸ್ತೆಯ ಪರಣೆ ಸಮೀಪ ಸುಮಾರು 50 ಮೀಟರ್‌ನಷ್ಟು ರಸ್ತೆಗೆ ಅಡ್ಡವಾಗಿರುವ ತೋಡು ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತದೆ. ಈ ತೋಡು ದಾಟಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಚಿಕ್ಕ ಮಕ್ಕಳನ್ನು ಹೆತ್ತವರು ಭಯದಲ್ಲೇ ಕಳುಹಿಸಬೇಕಾದ ಸ್ಥಿತಿ ಇದೆ.

ಕಳೆದ ವರ್ಷ ಮಳೆಗಾಲದಲ್ಲಿ 20ಕ್ಕೂ ಹೆಚ್ಚು ಬಾರಿ ಈ ರಸ್ತೆ ಮುಳುಗಡೆಯಾಗಿತ್ತು. ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ, ಜಿಪಂ ಇಂಜಿನಿಯರ್ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಬಾರಿ ಮಳೆಗಾಲಕ್ಕೂ ಮುನ್ನ ಸಮಸ್ಯೆ ಬಗೆಹರಿಯುವ ವಿಶ್ವಾಸವಿತ್ತು. ಆದರೆ ಮಳೆಗಾಲ ಸಮೀಪಿಸುತ್ತಿದ್ದರೂ ಯಾವುದೇ ಬೆಳವಣಿಗೆಯಾಗಿಲ್ಲ.

ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತದೆ. ರಸ್ತೆಯ ತಳವೂ ಗೋಚರವಾಗುವುದಿಲ್ಲ. ಜತೆಗೆ ಕೆಸರೂ ತುಂಬಿರುತ್ತದೆ. ಬೇಸಿಗೆಯಲ್ಲಿ ನೀರಿನ ಹರಿವು ಇಲ್ಲದಿರುವುದರಿಂದ ಅಪಾಯಕಾರಿ ಸ್ಥಿತಿ ತಂದೊಡ್ಡಲಿದೆ. ಈ ಸ್ಥಳದಲ್ಲಿ ಕಿರು ಸೇತುವೆ ನಿರ್ಮಾಣ ಅಗತ್ಯ.
ವಸಂತ ಗೌಡ ಚಾಕೊಟೆತ್ತಡಿ

ಕೃಷಿಯುತ್ಪನ್ನ ಸಾಗಾಟಕ್ಕೆ ತೊಂದರೆ: ಈ ಭಾಗದಲ್ಲಿ ಹೆಚ್ಚು ಮಂದಿ ತರಕಾರಿ, ಅಡಕೆ, ತೆಂಗು ಕೃಷಿಕರಿದ್ದಾರೆ. ಕೃಷಿಕರು ಹೆಚ್ಚಾಗಿ ಇದೇ ರಸ್ತೆ ಬಳಸುತ್ತಿದ್ದು, ಮಳೆಗಾಲದಲ್ಲಿ ತಮ್ಮ ಕೃಷಿಯುತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಾಟ ಮಾಡಬೇಕಾದರೆ ಹರಸಾಹಸ ಪಡಬೇಕಾಗಿದೆ. ಇಲ್ಲಿ ಸರಿಯಾದ ಚರಂಡಿ ಹಾಗೂ ಮೋರಿ ನಿರ್ಮಾಣ ಕಾರ್ಯವೂ ಆಗಬೇಕಿದೆ. ಕಿರು ಸೇತುವೆ ನಿರ್ಮಾಣವಾದರೆ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಸಹಕಾರಿಯಾಗುತ್ತದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಮನೆ ತಲುಪಲು ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗುತ್ತದೆ.

ಸವಣೂರು- ಹೊಸಗದ್ದೆ ರಸ್ತೆಗೆ ಡಾಂಬರು

ಕಡಬ: ಬೆಳಂದೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಸವಣೂರು- ಕುಮಾರಮಂಗಲ-ಮಾಡಾವು ರಸ್ತೆ ಅಭಿವೃದ್ಧಿ ಕಾಮಗಾರಿ ಕೊನೆಗೂ ಆರಂಭವಾಗಿದೆ. ಈ ಮೂಲಕ ಜನರ ಬಹುವರ್ಷಗಳ ಬೇಡಿಕೆ ಈಡೇರಲಿದೆ.
ಹೊಂಡ-ಗುಂಡಿಗಳಿಂದ ಕೂಡಿದ ಈ ರಸ್ತೆ 15 ವರ್ಷಗಳಿಂದ ಡಾಂಬರು ಕಂಡಿರಲಿಲ್ಲ. ಈ ರಸ್ತೆ ತೀರ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆವಾಗಿತ್ತು. ಸುತ್ತಮುತ್ತಲಿನ ರಸ್ತೆಗಳು ವಿಸ್ತರಣೆಯಾಗಿ ಡಾಂಬರು ಅಳವಡಿಕೆಯಾಗಿದ್ದರೂ 7 ಕಿ.ಮೀ ಉದ್ದದ ಈ ರಸ್ತೆ ಮಾತ್ರ ಪ್ರಗತಿ ಕಂಡಿರಲಿಲ್ಲ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿತ್ತು.

ಸುಳ್ಯ ಶಾಸಕ ಎಸ್.ಅಂಗಾರ ಅವರ 23.4 ಲಕ್ಷ ರೂ.ಗಳ ಅನುದಾನದಿಂದ ಈ ರಸ್ತೆ ಡಾಂಬರು ಕಾಣುತ್ತಿದೆ. ಕೆಲ ಸಮಯಗಳ ಹಿಂದೆ ಶಾಸಕರ 10 ಲಕ್ಷ ರೂ. ಮಳೆಹಾನಿ ಅನುದಾನದಲ್ಲೂ ರಸ್ತೆ ದುರಸ್ತಿ ಮಾಡಲಾಗಿತ್ತು. ರಸ್ತೆ ಮೂಲಕ ಮಾಡಾವು ಪುತ್ತೂರು, ಬೆಳ್ಳಾರೆ, ಪೆರ್ಲಂಪಾಡಿ, ಆಮ್ಚಿನಡ್ಕ, ಮುಳ್ಳೇರಿಯ ಸಂಪರ್ಕಿಸಬಹುದು. ರಸ್ತೆ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಆಗ್ರಹಿಸುತತಿದ್ದರೂ ಇಲ್ಲಿ ತನಕ ಸ್ಪಂದನೆ ದೊರೆತಿರಲಿಲ್ಲ.
ಹಲವು ವರ್ಷಗಳಿಂದ ರಸ್ತೆ ದುರಸ್ತಿ ಕುರಿತ ಮನವಿಗೆ ಸ್ಪ್ಪಂದನೆ ಸಿಗದ ಕಾರಣ 2018ರ ಆ.21ರಂದು ಊರವರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ರಸ್ತೆ ದುರಸ್ತಿ ಪಡಿಸುವ ಭರವಸೆ ಜನಪ್ರತಿನಿಧಿಗಳಿಂದ ಲಭಿಸಿತ್ತು.

ಈ ರಸ್ತೆ ಅಭಿವೃದ್ಧಿ ನಮ್ಮ ಗ್ರಾಮದ ಬಹುಕಾಲದ ಬೇಡಿಕೆ. ಕಳೆದ ಒಂದೂವರೆ ದಶಕಗಳಿಂದ ರಸ್ತೆ ಅಭಿವೃದ್ಧ್ದಿಗಾಗಿ ಜಿಪಂ ಸದಸ್ಯರು, ಶಾಸಕರು, ಸಂಸದರಿಗೆ ಮನವಿ ಮಾಡಲಾಗಿತ್ತು. ರಸ್ತೆ ತೀರ ಹದಗೆಟ್ಟಿದ್ದಾಗ ಊರವರೇ ಸೇರಿ ಶ್ರಮದಾನ ಮೂಲಕ ದುರಸ್ತಿಪಡಿಸಿದ್ದರು. ಒಂದು ಬಾರಿ ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ ಕೂಡ ನಡೆಸಿದ್ದೆವು. ಗ್ರಾಪಂ ಸಾಮಾನ್ಯ ಸಭೆಗಳಲ್ಲಿ ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆಗಳಿಗೂ ಕಳುಹಿಸಿಕೊಡಲಾಗಿತ್ತು.
ಗಿರಿಶಂಕರ ಸುಲಾಯ ಸವಣೂರು ಗ್ರಾಪಂ ಸದಸ್ಯ