ಅಜ್ಜಂಪುರ: ಚುನಾವಣೆ ವೇಳೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡು ಗ್ರಾಮೀಣ ಮತದಾರರು ನನ್ನ ಕೈಹಿಡಿದಿದ್ದಾರೆ. ಅವರ ಋಣ ತೀರಿಸುವ ಹೊಣೆ ನನ್ನ ಮೇಲಿರುವುದರಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ರಂಗಾಪುರ-ಕಾರಣಘಟ್ಟ-ಹುಣಸಘಟ್ಟ ನಡುವಿನ 4 ಕಿಮೀ ರಸ್ತೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಲ ಗ್ರಾಮಗಳಿಗೆ ಕಾಂಕ್ರಿಟ್ ರಸ್ತೆ ಅಗತ್ಯವಿದೆ. ಮತ್ತೆ ಕೆಲವು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಬೇಕಿದೆ. ಶಾಸಕರ ಅನುದಾನ ಬಳಸಿಯಾದರೂ ಶುದ್ಧ ನೀರಿನ ಘಟಕ ಸ್ಥಾಪಿಸಲಾಗುವುದು. ಅಜ್ಜಂಪುರ-ಅತ್ತಿಮೊಗ್ಗೆ- ಕಲ್ಲುಶೆಟ್ಟಿಹಳ್ಳಿ- ರಂಗಾಪುರ- ಕಾರಣಘಟ್ಟ- ಹುಣಸಘಟ್ಟ- ತರೀಕೆರೆ ಕಡೆಗೆ ಸರ್ಕಾರಿ ಬಸ್ ಸೇವೆ ಒದಗಿಸಲು ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಹಿಂದಿನ ಶಾಸಕರು ತರೀಕೆರೆ-ಅಂತರಘಟ್ಟೆ ಗಡಿವರೆಗಿನ ರಸ್ತೆ ಮಾಡಿಸಿ, ತಾಲೂಕಿನ ಎಲ್ಲ್ಲ ರಸ್ತೆ ಅಭಿವೃದ್ಧಿಗೊಳಿದ್ದಾಗಿ ಹೇಳುತ್ತಿದ್ದಾರೆ. ಆದರೆ ಇಂದಿಗೂ ಬಹುತೇಕ ಗ್ರಾಮಗಳ ರಸ್ತೆಗಳು ಸಂಚರಿಸಲಾರದಷ್ಟು ಸ್ಥಿತಿಯಲ್ಲಿವೆ. ಈಗಿನ ಶಾಸಕರು ರಸ್ತೆಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ತರುವ ಯೋಜನೆ ರೂಪಿಸಿದ್ದಾರೆ
ಗ್ರಾಮಕ್ಕೆ ಕಾಂಕ್ರಿಟ್ ರಸ್ತೆ, ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಮುಖಂಡ ಜಯಣ್ಣ, ಬಹುಗ್ರಾಮ ಯೋಜನೆ ಪೂರ್ಣಗೊಳಿಸಿ, ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವೃತ್ತ ಶಿಕ್ಷಕ ಬಸವರಾಜಪ್ಪ ಒತ್ತಾಯಿಸಿದರು.
ತಾಪಂ ಸದಸ್ಯೆ ಪ್ರತಿಮಾ ಸೋಮಶೇಖರ್, ಸೊಕ್ಕೆ ಗ್ರಾಪಂ ಅಧ್ಯಕ್ಷ ರೇವಣಸಿದ್ದಪ್ಪ, ದೊಡ್ಡಬೋಕಿಕೆರೆ ವಿಎಸ್ಎಸ್ಎನ್ ಅಧ್ಯಕ್ಷ ಸತೀಶ್ಚಂದ್ರ, ಜಿ.ಟಿ.ಧಮೇಂದ್ರ, ಇಂಜಿನಿಯರ್ ಮೋಹನ್ಕುಮಾರ್, ಪಿಡಿಒ ವಿನಯ್, ಪ್ರಸನ್ನಕುಮಾರ್ ಇತರರಿದ್ದರು.