ಮದ್ದೂರು: ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ ಗ್ರಾಮಗಳ ಅಬಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದು, ಈಗಾಗಲೇ ಸುಮಾರು 200 ಕೋಟಿ ರೂ.ಗೂ ಅಧಿಕ ಕಾಮಗಾರಿಗಳಿಗೆ ಚಾಲನೆ ನೀಡಿರುವುದಾಗಿ ಶಾಸಕ ಕೆ.ಎಂ.ಉದಯ ತಿಳಿಸಿದರು.

ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಶನಿವಾರ ಕಾವೇರಿ ನೀರಾವರಿ ನಿಗಮದ ವತಿಯಿಂದ ಬಿಡುಗಡೆಯಾಗಿರುವ 25 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ನಿಡಘಟ್ಟ, ಕದಲೂರು, ತೊರೆಚಾಕನಹಳ್ಳಿ, ಅಣ್ಣೂರು, ಸಿ.ಎ.ಕೆರೆ, ಗೊರವನಹಳ್ಳಿ ಇನ್ನಿತರ ಗ್ರಾಮಗಳಲ್ಲಿ ಹಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ತಾವು ಶಾಸಕರಾದ ಬಳಿಕ ನಾಲೆಗಳ ಆಧುನೀಕರಣ, ಕೆರೆಕಟ್ಟೆಗಳ ಅಭಿವೃದ್ಧಿ, ಕುಡಿಯುವ ನೀರಿಗೆ ಪ್ರಥಮ ಆದ್ಯತೆ, ವಿದ್ಯುತ್ ಉಪವಿಭಾಗ ಕೇಂದ್ರಗಳನ್ನು ತೆರೆದು ಸ್ಥಳೀಯ ರೈತರಿಗೆ ಅನುಕೂಲ ಕಲ್ಪಿಸಿರುವುದಾಗಿ ಹೇಳಿದರು.
ಕ್ಷೇತ್ರದ ಜನರು ತಮ್ಮ ಮೇಲೆ ವಿಶ್ವಾಸವಿಟ್ಟು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಗಲಿರುಳು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಈಗಾಗಲೇ ಸುಮಾರು 400 ಕೋಟಿಗೂ ಹೆಚ್ಚು ಅಬಿವೃದ್ಧಿ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದರು.
ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಶಾಶ್ವತ ಯೋಜನೆಗಳನ್ನು ರೂಪಿಸಬೇಕೆಂಬ ನಿಟ್ಟಿನಲ್ಲಿ ಪ್ರತಿದಿನವೂ ಕ್ಷೇತ್ರದಲ್ಲೇ ಉಳಿದು ಗ್ರಾಮಗಳಿಗೆ ಸಂಚರಿಸಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಿ ಕಾಮಗಾರಿಗಳಿಗೆ ವೇಗ ಕಲ್ಪಿಸುತ್ತಿರುವುದಾಗಿ ಹೇಳಿದರು.
ಗ್ರಾಪಂ ಸದಸ್ಯರಾದ ಸ್ವರೂಪ್, ಜವನಮ್ಮ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಿ.ರಾಘವ, ಮಾಜಿ ಅಧ್ಯಕ್ಷ ಯೋಗೇಶ್, ಮಾಜಿ ಸದಸ್ಯ ಸುರೇಶ್, ಮುಖಂಡರಾದ ಪ್ರತಾಪ್, ಚಂದ್ರಣ್ಣ, ಶಿವಕುಮಾರ್ ಇತರರಿದ್ದರು.