More

    ಮುಂಡ್ಕೂರು, ಬೆಳ್ಮಣ್ ರಸ್ತೆ ಸರ್ವೇ ಕಾರ್ಯ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್

    ಮಂಗಳೂರು -ಬಜ್ಪೆ-ಅತ್ರಾಡಿ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಂಡುಬರುತ್ತಿದ್ದು ಒಂದು ವಾರದಿಂದ ಮುಂಡ್ಕೂರು, ಬೆಳ್ಮಣ್ ರಸ್ತೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ರಸ್ತೆ ಬದಿ ಜಮೀನು ಹಾಗೂ ಕಟ್ಟಡ ಮಾಲೀಕರಿಗೆ ಲೋಕೋಪಯೋಗಿ ಇಲಾಖೆ ಕಚೇರಿಯಿಂದ ನವೆಂಬರ್‌ನಲ್ಲಿ ಜಮೀನು ತೆರವುಗೊಳಿಸುವ ಬಗ್ಗೆ ನೋಟಿಸ್ ಜಾರಿಯಾಗಿದೆ.

    ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ 67ರ ಕಿ.ಮೀ. 36.48ರಿಂದ , ಕಿ.ಮೀ. 46.28 ಮತ್ತು ಕಿ.ಮೀ.49.99 ರವರೆಗೆ (ಸಂಕಲಕರಿಯ-ಮುಂಡ್ಕೂರು-ಬೆಳ್ಮಣ್ ರಸ್ತೆ ಹಾಗೂ ಬೆಳ್ಮಣ್-ಗುಂಡುಕಲ್ಲು ರಸ್ತೆ) ಬರುವ ರಸ್ತೆ ಅಭಿವೃದ್ಧಿಪಡಿಸುವ ಕುರಿತು ರಸ್ತೆಯ ಎರಡೂ ಕಡೆ ಮಂಗಳೂರಿನ ಭೂಮಿ ಸರ್ವೇ ಸಂಸ್ಥೆ ಎರಡು ಗುಂಪುಗಳಾಗಿ ಕೆಲಸ ಮಾಡುತ್ತಿದೆ. ಮುಂಡ್ಕೂರು ಭಾಗದಲ್ಲಿ ರಸ್ತೆ ಇಕ್ಕಟ್ಟಾಗಿದ್ದು ಜನ ಜಾಗ ಬಿಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

    ಈ ಹಿಂದೆ ಮುಂಡ್ಕೂರು, ಸಂಕಲಕರಿಯ ಭಾಗದ ಜನರಿಗೆ ರವಾನೆಯಾದ ನೋಟಿಸ್ ಹಾಗೂ ಇತ್ತೀಚೆಗೆ ನಡೆದ ಸರ್ವೇ ಕಾರ್ಯದಿಂದ ಮಂಗಳೂರು-ಅತ್ರಾಡಿ ಹೆದ್ದಾರಿ ಯೋಜನೆಗೆ ಮತ್ತೆ ಮರು ಜೀವ ಬಂದಿದೆ. ಹೆದ್ದಾರಿ ಯೋಜನೆಗೆ ಜಾಗ ಬಿಟ್ಟು ಕೊಡಲು ಕೆಲವರು ತಯಾರಾಗಿದ್ದಾರೆ. ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಹತ್ತಿರದ ರಸ್ತೆ ಇದಾಗಿದ್ದು ಬಹುತೇಕ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ರಸ್ತೆ ನಿರ್ಮಾಣಗೊಂಡಲ್ಲಿ ವಾಹನ ಸವಾರರಿಗೆ ಅನುಕೂಲವಾಗಲಿದೆ.

    ಈ ಹಿಂದೆ ನಮ್ಮೂರಿನ ಹೆಚ್ಚಿನವರಿಗೆ ನೋಟಿಸ್ ಜಾರಿಯಾಗಿತ್ತು. ಪ್ರಸಕ್ತ ಏಕಾಏಕಿ ಸರ್ವೇ ಕಾರ್ಯ ನಡೆಯುತ್ತಿರುವ ಬಗ್ಗೆ ಒಂದಿಷ್ಟು ಆತಂಕ ಎದುರಾದರೂ ಸದುದ್ದೇಶದಿಂದ ಕೂಡಿದ ಕೆಲಸಕ್ಕೆ ನಮ್ಮ ಅಡ್ಡಿ ಇಲ್ಲ.
    -ಪ್ರತಾಪ ಶೆಟ್ಟಿ, ಮುಂಡ್ಕೂರು ಗ್ರಾಮಸ್ಥ

    ರಸ್ತೆಯ ಮಧ್ಯದಿಂದ ಇಕ್ಕೆಲಗಳಿಗೆ ತಲಾ 15 ಮೀ.ನಷ್ಟು ರಸ್ತೆ ವಿಸ್ತರಣೆಗೆ ಸರ್ವೇ ಮಾಡಲಾಗಿದೆ. ಕಟ್ಟಡಗಳಿದ್ದಲ್ಲಿ ಲೋಕೋಪಯೋಗಿ ಇಲಾಖೆಯೇ ನಿರ್ಧರಿಸಲಿದೆ.
    -ಭೂಮಿ ಸರ್ವೇ ಸಂಸ್ಥೆ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts