ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ಹೊಸಕುಂಬ್ರಿ- ಶಂಬಡೆಮನೆಕೇರಿ ರಸ್ತೆ ಕುಸಿತಗೊಂಡಿದೆ.
ಮಳೆ-ಗಾಳಿಯ ಪರಿಣಾಮ ಹೊಸಕುಂಬ್ರಿ- ಶಂಬಡೆಮನೆಕೇರಿ ರಸ್ತೆ ಕೊರಟಗೆರೆ ಬಳಿ ಕುಸಿದಿದೆ. ಸದ್ಯ ಒಂದು ಭಾಗದಲ್ಲಿ ಸಂಚರಿಸುವಂತಿದ್ದು, ಮಳೆ ಮುಂದುವರಿದರೆ ರಸ್ತೆ ಸಂಪೂರ್ಣ ಕುಸಿದು ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ವಿವಿಧೆಡೆ ಹಾನಿ: ಮಾವಿನಮನೆ ಗ್ರಾ.ಪಂ. ವ್ಯಾಪ್ತಿಯ ಬಂಕೊಳ್ಳಿಯಲ್ಲಿ ಮಹಾಬಲೇಶ್ವರ ಕುಣಬಿ ಅವರ ಮನೆಯ ಗೋಡೆ ಕುಸಿದಿದೆ. ವಜ್ರಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀಗಾರಿನಲ್ಲಿ ವಿನಾಯಕ ಗೌಡ ಎಂಬುವರ ಮನೆ ಕುಸಿದು ಹಾನಿಯಾಗಿದೆ. ಮಾಗೋಡಿನಲ್ಲಿ ತಾರೀಮನೆಯ ಪಾರ್ವತಿ ಭಟ್ಟ ಅವರ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಜಾನುವಾರುಗಳಿಗೆ ಅಪಾಯ ಉಂಟಾಗಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.