Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಖಾಲಿ ಚೆಕ್

Monday, 18.06.2018, 3:14 AM       No Comments

ಬೆಳಗಾವಿ: ಎಷ್ಟೇ ಖರ್ಚಾದರೂ ಪರವಾಗಿಲ್ಲ, ಮಳೆಗಾಲ ಆರಂಭಗೊಂಡಿರುವುದರಿಂದ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಕ್ಷಣವೇ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಎಚ್.ಡಿ.ರೇವಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆ ಹಾಗೂ ನೆರೆ ಹಾವಳಿಯಿಂದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ರಸ್ತೆ, ಸೇತುವೆ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗೆ ಆಗಿರುವ ಹಾನಿಯ ಪರಿಶೀಲನೆಗೆ ಬೆಳಗಾವಿ ಜಿ.ಪಂ.ಸಭಾಂಗಣದಲ್ಲಿ ಭಾನುವಾರ ನಡೆದ ಮೂರು ಜಿಲ್ಲೆಗಳ ಪ್ರಮುಖ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಾಳಾಗಿರುವ ರಸ್ತೆಗಳ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ತಕ್ಷಣವೇ ಆರಂಭಿಸಬೇಕು. ಈ ಕಾರ್ಯಕ್ಕಾಗಿ ಅಧಿಕಾರಿಗಳಿಗೆ ಖಾಲಿ ಚೆಕ್ ನೀಡಲಾಗಿದೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಒಟ್ಟು 3,874.65 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಒಟ್ಟು 7028.32 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಕೂಡಲೇ ಕ್ರಮ ಜರುಗಿಸಬೇಕು. ಕಾಮಗಾರಿ ವಿಳಂಬವಾಗಬಾರದು ಎಂಬ ಕಾರಣಕ್ಕೆ ಮುಖ್ಯ ಇಂಜಿನಿಯರ್‌ಗಳಿಗೆ 10 ಕೋಟಿ ರೂ. ವರೆಗೆ, ಸುಪರಿಂಟೆಂಡೆಂಟ್ ಇಂಜಿನಿಯರ್‌ಗಳಿಗೆ 2 ಕೋಟಿ ರೂ. ವರೆಗೆ ಹಾಗೂ ಕಾರ್ಯ ನಿರ್ವಾಹಕ ಇಂಜಿನಿಯರ್‌ಗಳಿಗೆ 1 ಕೋಟಿ ರೂ.ವರೆಗಿನ ಕಾಮಗಾರಿಗಳನ್ನು ನಡೆಸಲು ಅಧಿಕಾರ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ರಸ್ತೆ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಸಚಿವ ರೇವಣ್ಣ ಅವರು, ಮೊದಲು ರಸ್ತೆಗಳ ಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುವುದು. ತಮ್ಮ ಕ್ಷೇತ್ರದಲ್ಲಿ ಪಕ್ಕಾ ರಸ್ತೆಗಳ ನಿರ್ಮಾಣಕ್ಕೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿದರೆ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ರೈಲ್ವೆ ನಿಲ್ದಾಣದ ಎದುರಿನ ರಸ್ತೆ ದುರವಸ್ಥೆ ಬಗ್ಗೆ ಗಮನ ಸೆಳೆದಾಗ, ಅಧಿಕಾರಿಗಳು ಇದು ದಂಡುಮಂಡಳಿ ವ್ಯಾಪ್ತಿಗೆ ಬರುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಯಾರದೇ ವ್ಯಾಪ್ತಿಗೆ ಬಂದರೂ, ಒಂದು ಸಲ ನಾವು ಅಭಿವೃದ್ದಿ ಪಡಿಸಿಕೊಡಲು ಸಿದ್ಧರಿದ್ದೇವೆ. ಈ ಬಗ್ಗೆ ಸೋಮವಾರ ಪರಿಶೀಲಿಸೋಣ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ದುರ್ಯೋಧನ ಐಹೊಳೆ, ಅನಿಲ ಬೆನಕೆ, ಲಕ್ಷ್ಮೀ ಹೆಬ್ಬಾಳ್ಕರ್, ಮಹಾದೇವಪ್ಪ ಯಾದವಾಡ ಅವರು ತಮ್ಮ ಕ್ಷೇತ್ರದಲ್ಲಿನ ರಸ್ತೆ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಆದಷ್ಟು ಬೇಗನೇ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಇಲಾಖೆಯ ಅಧೀಕ್ಷಕ ಎಂಜಿನಿಯರ್ ಅವರಿಗೆ ಸಚಿವರು ಸೂಚನೆ ನೀಡಿದರು.
ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ್ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಳಗಾವಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್, ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ , ಲೋಕೋಪಯೋಗಿ ಇಲಾಖೆಯ ಮೂರೂ ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಶಾಸಕರ ಭವನ-ಸಿಎಂ ಜತೆ ಚರ್ಚೆ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿವರ್ಷ ಅಧಿವೇಶನ ನಡೆಯುತ್ತಿದೆ. ಶಾಸಕರಿಗೆ ವಸತಿ ಕಲ್ಪಿಸಲು ಶಾಸಕರ ಭವನದ ನಿರ್ಮಾಣ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅಭಿಪ್ರಾಯಪಟ್ಟರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಸಚಿವ ಎಚ್.ಡಿ.ರೇವಣ್ಣ ಅವರು, ಶಾಸಕರ ಭವನ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಅವರ ಜತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಸಿಆರ್‌ಎಫ್-ಕೇಂದ್ರಕ್ಕೆ ನಿಯೋಗ

ಸಿಆರ್‌ಎಫ್ ಅಡಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ರಾಜ್ಯದ ಸಂಸದರು ಹಾಗೂ ರಾಜ್ಯಸಭೆ ಸದಸ್ಯರ ನಿಯೋಗ ಕರೆದುಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಾಗುವುದು ಎಂದು ಸಚಿವ ರೇವಣ್ಣ ತಿಳಿಸಿದರು.
ಸಿಆರ್‌ಎಫ್ ಸುಮಾರು 12 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಪ್ರತಿ ವರ್ಷ ಕೇವಲ 500 ಕೋಟಿ ರೂ. ಮಾತ್ರ ಬಿಡುಗಡೆ ಮಾಡುತ್ತಿರುವುದರಿಂದ ಕಾಮಗಾರಿ ಪೂರ್ಣಗೊಳಿಸುವುದು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು ಹಾಗೂ ಸಂಸದರಿಗೆ ವಿವರಿಸಿದರು.

ಇದಕ್ಕೂ ಮುನ್ನ ಸಂಸದ ಸುರೇಶ ಅಂಗಡಿ ಪ್ರಸ್ತಾಪ ಮುಂದಿರಿಸಿ, ಈ ಹಿಂದೆಯೂ ಕೇಂದ್ರಕ್ಕೆ ನಿಯೋಗ ಒಯ್ದು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಒತ್ತಾಯಿಸಲಾಗಿತ್ತು. ಈ ಬಾರಿಯೂ ಕೇಂದ್ರ ಸಚಿವರ ಬಳಿ ನಿಯೋಗ ಒಯ್ಯೋಣ ಎಂದಾಗ ಇದಕ್ಕೆ ಸಚಿವ ರೇವಣ್ಣ ಸಹಮತಿ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Back To Top