ಮಳೆಗೆ ಹದಗೆಟ್ಟಿದೆ ಮೊಗೇರಿ ಸೋರೆಬೆಟ್ಟು ರಸ್ತೆ

ಬೈಂದೂರು: ಊರಿನ ಬೆಳವಣಿಗೆಗೆ ಆಡಳಿತ ಇಚ್ಛಾಶಕ್ತಿ ಮತ್ತು ಬದ್ಧತೆ ಅಗತ್ಯ. ಕಾಟಾಚಾರಕ್ಕಾಗಿ ಕೆಲಸ ಮಾಡುವುದರಿಂದ ಅನಾಹುತವೇ ಜಾಸ್ತಿ. ಇದಕ್ಕೆ ಕೆರ್ಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗೇರಿ ಸೋರೆಬೆಟ್ಟು ರಸ್ತೆ ಸ್ಪಷ್ಟ ನಿದರ್ಶನ.

ಈ ಭಾಗದ ಜನರ ಬಹಳ ದಿನಗಳ ಬೇಡಿಕೆ ಭಾಗವಾಗಿ ಈ ರಸ್ತೆ ಸಮತಟ್ಟಿಗೆ ಬೇಸಿಗೆಯಲ್ಲಿ ಮಣ್ಣು ಸುರಿಯಲಾಯಿತು. ಪ್ರಸಕ್ತ ಸೋಮವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗೆ ಹಾಕಿದ ಮಣ್ಣು ಕೆಸರುಮಯವಾಗಿ ಜನರಿಗೆ ತೊಂದರೆ ಉಂಟು ಮಾಡುತ್ತಿದೆ. ವಾಹನಗಳು ಸಂಚರಿಸುತ್ತಿರುವಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕೆೆಸರಿನ ಸಿಂಚನವಾಗುತ್ತಿದೆ. ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ತೆರಳುವುದೂ ಕಷ್ಟ ಎಂಬಂತಾಗಿದೆ. ಅಲ್ಲಲ್ಲಿ ಹೊಂಡಗುಂಡಿಗಳಾಗಿದ್ದು, ಚಿಕ್ಕ ಮಕ್ಕಳ ಎದೆ ಎತ್ತರಕ್ಕೆ ನೀರು ತುಂಬಿದೆ. ಪುಟಾಣಿ ಮಕ್ಕಳು ಭಯದಿಂದಲೇ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಹಾಗೂ ಶಾಲೆ ಬಿಡುವ ಸಮಯದ ತನಕ ಕಾದು ಕುಳಿತು ಅವರನ್ನು ಮನೆಗೆ ಕರೆ ತರುವ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ.

ರಸ್ತೆ ದುರಸ್ತಿ ಮಾಡಿಕೊಡುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಕಾಲ್ನಡಿಗೆಯೂ ದುಸ್ತರವಾಗಿದ್ದು, ಸ್ಥಳೀಯರು ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ. ಸಮಸ್ಯೆ ಉಲ್ಭಣಗೊಂಡು ಜೀವಹಾನಿಯಾಗುವ ಮೊದಲು ಸ್ಥಳೀಯ ಆಡಳಿತ ಎಚ್ಚೆತ್ತು ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತುಂಬ ದಿನಗಳಿಂದ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದಾಡಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಕುರಿತು ಚಿಂತಿಸುವವರು ಯಾರೂ ಇಲ್ಲವೆಂಬಂತಾಗಿದೆ. ಈ ಸಮಸ್ಯೆಯಿಂದ ಮಕ್ಕಳ ಜೀವಕ್ಕೆ ಹಾನಿಯಾಗುವ ಮೊದಲು ಸಂಬಂಧಿತ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಗಮನ ಹರಿಸಿ ಸೂಕ್ತ ಪರಿಹಾರ ಕಲ್ಪಿಸಿ ಶೀಘ್ರ ರಸ್ತೆ ದುರಸ್ತಿ ಮಾಡಿಕೊಡಬೇಕು.
ಸೋರೆಬೆಟ್ಟು ಗ್ರಾಮಸ್ಥರು

ಪಂಚಾಯಿತಿಯಿಂದ ಬೇಸಿಗೆಯಲ್ಲಿ ನೂತನ ರಸ್ತೆ ನಿರ್ಮಿಸಿ ಮಣ್ಣು ಹಾಕಲಾಗಿತ್ತು. ಸದ್ಯ ಮಳೆ ಹೆಚ್ಚಾಗಿ ರಸ್ತೆಯಲ್ಲಿ ಕೆಸರಾಗಿದೆ. ಮಳೆ ಕಡಿಮೆ ಆದ ಅನಂತರ ಶಿಲೆಕಲ್ಲು ಹಾಕಿ ಸರಿಪಡಿಸಲಾಗುವುದು. ಈ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ.
ನಾಗರತ್ನ
ಪಿಡಿಒ ಕೆರ್ಗಾಲ್ ಗ್ರಾಪಂ

Leave a Reply

Your email address will not be published. Required fields are marked *