ರಾಜಸ್ಥಾನದಲ್ಲಿ ರಸ್ತೆ ಅಪಘಾತ, ಕರ್ತವ್ಯನಿರತ ಸೈನಿಕ ಹುತಾತ್ಮ

ಚಿಕ್ಕೋಡಿ: ರಾಜಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದಾಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಸೈನಿಕ ಶುಕ್ರವಾರ ಮೃತಪಟ್ಟಿದ್ದಾರೆ.

ಸಾಗರ ಸುರೇಶ ಮಗದುಮ್ಮ ಹುತಾತ್ಮರಾದವರು.ಡಿಸೆಂಬರ್ 15ರಂದು ಅಜ್ಮೀರ-ಕಾಶ್ಮೀರ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಸಾಗರ ಮಗದುಮ್ಮ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಮೃತ ಸೈನಿಕ 6 ತಿಂಗಳಲ್ಲಿ ಸೈನ್ಯದಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಲಿದ್ದರು.

ಸಾಗರ ಸುರೇಶ ಮಗದುಮ್ಮ ಮೂಲ ಸುಳಗಾಂವ ಗ್ರಾಮದವರಾದರೂ ಅವರ ಕುಟುಂಬ ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದಲ್ಲಿ ನೆಲೆಸಿತ್ತು. ಸೈನಿಕನಿಗೆ ತಾಯಿ, ಪತ್ನಿ ಮತ್ತು ಐದು ವರ್ಷ ಮಗಳು ಇದ್ದಾಳೆ.

ಸಾಗರ ಅವರ ಪಾರ್ಥಿವ ಶರೀರ ಶನಿವಾರ ರಾತ್ರಿ ನಾಯಿಂಗ್ಲಜ ಗ್ರಾಮಕ್ಕೆ ಆಗಮಿಸಲಿದ್ದು, ಭಾನುವಾರ ಬೆಳಗ್ಗೆ ಸಕಲ ಸರ್ಕಾರಿ ಗೌರವದೊಂದಿಗೆ ನಾಯಿಂಗ್ಲಜ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ವಿವಿಧ ತಾಲೂಕುಗಳ ಒಟ್ಟು 5 ಸೈನಿಕರು ಮೃತಪಟ್ಟಿದ್ದಾರೆ.