ಆರ್‌ಜೆಡಿ ನಾಯಕರ ಹತ್ಯೆ ಶಂಕೆ: ಬಾಲಕನನ್ನು ಹೊಡೆದು ಸಾಯಿಸಿದ ಸ್ಥಳೀಯರು

ಪಾಟ್ನಾ: ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದ ನಾಯಕ ಇಂದಲ್‌ ಪಾಸ್ವಾನ್‌ ಎಂಬವರನ್ನು ಶೂಟ್‌ ಮಾಡಿ ಹತ್ಯೆ ಮಾಡಿದ ಬೆನ್ನಲ್ಲೇ ಬಿಹಾರದ ನಳಂದಾದಲ್ಲಿ 13 ವರ್ಷದ ಬಾಲಕನನ್ನು ಹೊಡೆದು ಸಾಯಿಸಿರುವ ಆತಂಕಕಾರಿ ಘಟನೆ ನಡೆದಿದೆ.

ಶೂಟೌಟ್​ ಆರೋಪಿಯ ಸಂಬಂಧಿಯಾದ ಬಾಲಕನಿಗೆ ಸ್ಥಳೀಯರು ಚೆನ್ನಾಗಿ ಥಳಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ನಳಂದಾದ ಮಾಗ್ಧಾದಲ್ಲಿ ಮಂಗಳವಾರ ರಾತ್ರಿ ಆರ್‌ಜೆಡಿ ನಾಯಕ ಇಂದಲ್ ಪಾಸ್ವಾನ್ ಅವರು ಮನೆಗೆ ಹಿಂತಿರುಗುತ್ತಿದ್ದ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ರಾತ್ರಿಯಿಡೀ ಪಾಸ್ವಾನ್ ಮನೆಗೆ ಬರದಿದ್ದರಿಂದ ಗಾಬರಿಗೊಂಡ ಮನೆಯವರು ಹುಡುಕಾಟ ಪ್ರಾರಂಭಿಸಿದಾಗ ಬುಧವಾರ ಬೆಳಗ್ಗೆ ಆತನ ಶವ ಮತ್ತು ಬೈಕ್ ಗ್ರಾಮದ ಹೊರಗೆ ಪತ್ತೆಯಾಗಿತ್ತು.

ಇದರಿಂದ ಕೋಪಗೊಂಡಿದ್ದ ಸ್ಥಳೀಯರು, ಬೆಂಬಲಿಗರು, ಪಾಸ್ವಾನ್‌ ಅವರನ್ನು ಹತ್ಯೆ ಮಾಡಿರುವ ಶಂಕೆ ಮೇರೆಗೆ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೆ, ಬಾಲಕನನ್ನು ಹೊಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)