ಐಆರ್‌ಸಿಟಿಸಿ ಹಗರಣ: ಆರ್‌ಜೆಡಿ ನಾಯಕ ಲಾಲು ಪ್ರಸಾದ್​ಗೆ ಮಧ್ಯಂತರ ಜಾಮೀನು

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಟೂರಿಸಂ ಕಾರ್ಪೊರೇಷನ್‌(IRCTC)ನ ಎರಡು ಹೋಟೆಲ್‌ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲು ಅವರು ರಾಂಚಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ವಿಚಾರಣೆ ನಡೆಸಿದ ಬಳಿಕ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಮಧ್ಯಂತರ ಜಾಮೀನು ನೀಡಿದ್ದಾರೆ. ಅನಾರೋಗ್ಯದಿಂದಾಗಿ ನ್ಯಾಯಾಲಯಕ್ಕೆ ಹಾಜಗರಾಗಲು ಸಾಧ್ಯವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದಲ್ಲದೆ, ಲಾಲು ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ನ್ಯಾಯಾಲಯವು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಲಾಲು ಅವರು ರೈಲ್ವೆ ಸಚಿವರಾಗಿದ್ದ 2004-2009ರ ಅವಧಿಯಲ್ಲಿ ರಾಂಚಿ ಮತ್ತು ಪುರಿಯಲ್ಲಿ ಐಆರ್‌ಸಿಟಿಸಿಯ ಎರಡು ಹೋಟೆಲ್‌ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡುವಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ನ್ಯಾಯಾಲಯವು ಈಗಾಗಲೇ ಲಾಲು ಯಾದವ್‌ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್‌ ಅವರಿಗೆ ಜಾಮೀನು ನೀಡಿದ್ದು, ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಜಾಮೀನನ್ನು ಜ. 19ರ ವರೆಗೆ ವಿಸ್ತರಿಸಿದೆ. (ಏಜೆನ್ಸೀಸ್)