ಅಕ್ಕಿಆಲೂರ: ಕಳೆದೊಂದು ವಾರದಿಂದ ಉತ್ತರ ಕನ್ನಡ ಹಾಗೂ ಅಕ್ಕಿಆಲೂರಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ವರದಾ ಮತ್ತು ಧರ್ಮಾ ನದಿ ತುಂಬಿ ಹರಿಯುತ್ತಿವೆ. ಇದೇ ರೀತಿಯ ಮಳೆ ಮುಂದುವರಿದರೆ ನದಿಗಳ ಪಾತ್ರದ ಇಕ್ಕೆಲದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ.
ಮಳೆಯಿಂದಾಗಿ ಮುಂಡಗೋಡ ತಾಲೂಕಿನ ಮಳಗಿಯಲ್ಲಿರುವ ಧರ್ಮಾ ಜಲಾಶಯದಲ್ಲಿ ನೀರಿನಮಟ್ಟ ಏರಿಕೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ವರದಾ ಮತ್ತು ಧರ್ಮಾ ನದಿಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದ ನದಿ ದಂಡೆಯ ಗ್ರಾಮಗಳ ಜನತೆ ಹಾಗೂ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಮಳೆಗಾಲದ ಸಮಯದಲ್ಲಿ ತುಂಬಿ ಹರಿಯುವ ವರದಾ ಮತ್ತು ಧರ್ಮಾ ನದಿಗಳಿಂದ ಹಾನಗಲ್ಲ ತಾಲೂಕಿನ ಹತ್ತಾರು ಗ್ರಾಮಗಳ ಜನತೆಯ ಬದುಕು ದುಸ್ತರವಾಗುತ್ತದೆ. ಶೀಗಿಹಳ್ಳಿ-ಸಿಂಗಾಪುರ ಗ್ರಾಮಗಳ ಅನೇಕ ಮನೆಗಳು ಮುಳುಗಡೆಯಾಗುತ್ತವೆ. ಬಾಳಂಬೀಡ ಮತ್ತು ಅರೇಲಕ್ಮಾಪುರ ಗ್ರಾಮದ ಸಂಪರ್ಕ ಸೇತುವೆ ಮುಳುಗಿ ನೂರಾರು ಎಕರೆ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಧರ್ಮಾ, ವರದಾ ನದಿಗಳ ಸಂಗಮ ಕೂಡಲ ಗ್ರಾಮದಿಂದ ನಾಗನೂರ ಮೂಲಕ ಹಾವೇರಿಗೆ ಸಂಪರ್ಕಿಸುವ ರಸ್ತೆ ಬಂದ್ ಆಗಿ ಅರ್ಧ ಊರು ಮುಳುಗಡೆಯಾಗುತ್ತದೆ. ವರದಾ ನದಿಯ ಒಳಹರಿವು ಹೆಚ್ಚಾಗಿ ಶೇಷಗಿರಿ ಗ್ರಾಮಕ್ಕೆ ನದಿ ನೀರು ಪ್ರವೇಶಿಸುತ್ತದೆ. ನದಿ ಬರಿದಾಗಿದ್ದಾಗ ಮರಳಿಗಾಗಿ ಗುಂಡಿ ಅಗೆದಿದ್ದರಿಂದ ಮಲಗುಂದ ಗ್ರಾಮದಲ್ಲಿ ವರದಾ ನದಿ ಪಾತ್ರದ ಹೊಲಗಳಲ್ಲಿ ನೀರು ಆವರಿಸಿಕೊಳ್ಳುತ್ತದೆ. ಈ ಹಿಂದೆ ನದಿಗಳ ಪ್ರವಾಹದಿಂದ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದಿದೆ.
ಪ್ರವಾಹ ಪೀಡಿತ ಗ್ರಾಮಗಳ ಪಟ್ಟಿ: ನದಿಗಳು ತುಂಬಿ ಹರಿದರೆ ಸಮಸ್ಯೆ ಅನುಭವಿಸುವ ಹಾನಗಲ್ಲ ತಾಲೂಕಿನ 24 ಗ್ರಾಮಗಳ ಪಟ್ಟಿಯನ್ನು ತಾಲೂಕು ಆಡಳಿತ ತಯಾರಿಸಿದೆ, ಕೂಡಲ, ನೀರಲಗಿ, ಅರಳೇಶ್ವರ, ಗೊಂದಿ, ಹಿರೇಕಣಗಿ, ಹೊಂಕಣ, ಶೀಗಿಹಳ್ಳಿ, ಹಿರೇಹುಲ್ಲಾಳ, ಯಳವಟ್ಟಿ ಸೇರಿ ವಿವಿಧ ಗ್ರಾಮಗಳ ಪಟ್ಟಿ ಮಾಡಲಾಗಿದೆ.
ಏತ ನೀರಾವರಿ ಮೂಲಕ ಕೆರೆ ತುಂಬಿಸಿ: ಉತ್ತರ ಕನ್ನಡ ಜಿಲ್ಲೆಯಿಂದ ಹಾನಗಲ್ಲ ತಾಲೂಕು ಪ್ರವೇಶಿಸಿ ತುಂಗಭದ್ರಾ ನದಿಯನ್ನು ಅನುಪಯುಕ್ತವಾಗಿ ಸೇರುವ ವರದಾ ನದಿ ಈಗ ತುಂಬಿ ಹರಿಯುತ್ತಿದೆ. ಈ ನೀರನ್ನು ಉಪಯೋಗಿಸಿಕೊಂಡು ಏತ ನೀರಾವರಿ ಮೂಲಕ ತಾಲೂಕಿನ ಕೆರೆಗಳಿಗೆ ನೀರು ಸರಬರಾಜು ಮಾಡಿದರೆ, ಒಂದು ವರ್ಷ ಮಳೆ ಕೈಕೊಟ್ಟರೂ ಜನತೆ ನೆಮ್ಮದಿಯ ಜೀವನ ನಡೆಸಬಹುದು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ಹಾನಗಲ್ಲ ತಾಲೂಕಿನಲ್ಲಿ ಬಾಳಂಬೀಡ ಹಾಗೂ ಹಿರೇಕೌಂಶಿ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು, ಈ ಯೋಜನೆಯಡಿ ವರದಾ ನದಿಯಿಂದ ತಾಲೂಕಿನ 250ಕ್ಕೂ ಅಧಿಕ ಕೆರೆಗಳಿಗೆ ನೀರು ಸರಬರಾಜಗೊಳ್ಳುತ್ತಿದೆ. ಇದನ್ನು ಹೊರತುಪಡಿಸಿ ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಿಂದ 93 ಕೆರೆಗಳು ಭರ್ತಿಯಾಗಲಿವೆ. ವರದಾ ನದಿಯಿಂದ ಚಿಕ್ಕಹುಲ್ಲಾಳ ಮತ್ತು ಉಪ್ಪಣಸಿ ಭಾಗದ ಕೆರೆಗಳು ಭರ್ತಿಯಾಗುತ್ತಿವೆ. ಮಲಗುಂದದಿಂದ ಅಕ್ಕಿಆಲೂರಿನ 150 ಎಕರೆಗೂ ಹೆಚ್ಚು ವಿಸ್ತೀರ್ಣದ ಈಶ್ವರ ಕೆರೆ, 3000 ಎಕರೆಗೂ ಅಧಿಕ ವಿಸ್ತೀರ್ಣದ ನರೇಗಲ್ಲ ಸೇರಿ ತಾಲೂಕಿನ ಬೃಹತ್ ಕೆರೆಗಳನ್ನು ತುಂಬಿಸಬೇಕಿದೆ.
ಸದ್ಯ ಹಾನಗಲ್ಲ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಿದೆ. ಆದರೂ ಸಂಭವನೀಯ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕು ಅಧಿಕಾರಿಗಳು, ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ. ಅಗತ್ಯಬಿದ್ದರೆ ಕಾಳಜಿ ಕೇಂದ್ರ ತೆರೆಯಲಾಗುವುದು. 2019ರಲ್ಲಿ ಮಳೆಯಿಂದ ಸಂಭವಿಸಿದ್ದ ಸಮಸ್ಯೆಗಳು ಈಗ ಎದುರಾಗುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದೇವೆ.
ರೇಣುಕಾ ಎಸ್. ತಹಸೀಲ್ದಾರ್, ಹಾನಗಲ್ಲ
2019ರ ಪ್ರವಾಹದ ಸಂದರ್ಭದಲ್ಲಿ ನರೇಗಲ್ಲ ಭಾಗ ಸೇರಿ ಹಾನಗಲ್ಲ ತಾಲೂಕಿನಲ್ಲಿ ಆದ ನಷ್ಟ ಅಷ್ಟಿಷ್ಟಲ್ಲ. ಮುಳುಗಡೆಯಾಗುವ ಗ್ರಾಮಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಭರವಸೆ ಈಡೇರಿಲ್ಲ. ವರ್ದಿ, ಕೂಡಲ, ನಾಗನೂರ ಜನತೆ ಹೈರಾಣಾಗಿದ್ದಾರೆ. ಈ ಭಾರಿ ನಿರ್ಲಕ್ಷ್ಯವಹಿಸದೆ ತಾಲೂಕು ಆಡಳಿತ ಸಮರ್ಥವಾಗಿ ಅತಿವೃಷ್ಟಿ ನಿಭಾಯಿಸಬೇಕು. ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಮಲ್ಲಿಕಾರ್ಜುನ ಅಗಡಿ, ಮಾಜಿ ನಿರ್ದೇಶಕ ಬಯಲುಸೀಮೆ ಅಭಿವೃದ್ಧಿ ನಿಗಮ