ಬರಡಾಗಿವೆ ನದಿಗಳು

ಕಾಸರಗೋಡು: ಜಿಲ್ಲೆಯಲ್ಲಿ ಎಂಟು ಪ್ರಮುಖ ಹೊಳೆಗಳು ಹರಿಯುತ್ತಿದ್ದರೂ, ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಇವುಗಳಲ್ಲಿ ಬಹುತೇಕ ನದಿಗಳು ಬತ್ತಿ ಬರಡಾಗುತ್ತಿದೆ. ಪಯಸ್ವಿನಿ, ನೀಲೇಶ್ವರ ಕವ್ವಾಯಿ, ಮಧುವಾಹಿನಿ, ಶಿರಿಯ, ಸೀರೆಹೊಳೆ ಸಹಿತ ಪ್ರಮುಖ ಹೊಳೆಗಳು ಜಿಲ್ಲೆಯಲ್ಲಿ ಹರಿಯುತ್ತಿದ್ದರೂ, ಜಿಲ್ಲೆಯ ನೀರಿನ ಸಮಸ್ಯೆ ತೀವ್ರವಾಗಿದೆ.

ಅಡ್ಕಸ್ಥಳ, ಪಳ್ಳತ್ತಡ್ಕ, ನೇರಪ್ಪಾಡಿ ಸಹಿತ ವಿವಿಧೆಡೆ ಕುಡಿಯುವ ನೀರಿನ ಯೋಜನೆ ಹಾಗೂ ಕೃಷಿಗಾಗಿ ಹೊಳೆಗೆ ತಾತ್ಕಾಲಿಕ ಕಟ್ಟ ನಿರ್ಮಿಸಲಾಗುತ್ತಿದ್ದು, ಇಲ್ಲಿಯೂ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದರಿಂದ ಕುಡಿಯುವ ನೀರಿನ ಯೋಜನೆಗಳಿಗೂ ನೀರಿಗೂ ತತ್ವಾರವಾಗಿದೆ.

ಹೊಳೆಗಳಿಗೆ ಅಡ್ಡ ಕಟ್ಟ ಕಟ್ಟಿ ಹಿಡಿದಿಟ್ಟುಕೊಳ್ಳುತ್ತಿದ್ದ ನೀರೂ ಬತ್ತಿ ಹೊಳೆ ಬರಿದಾಗಿದೆ. ಹೊಳೆಯಲ್ಲಿ ಬಾವಿತೋಡಿ ಕಾಂಕ್ರೀಟ್ ರಿಂಗ್ ಇಳಿಸಿ ಪಂಪು ಮೂಲಕ ನೀರು ಮೇಲಕ್ಕೆತ್ತುತ್ತಿದ್ದ ಕೃಷಿಕರು ಬಾವಿಗಳನ್ನು ಮತ್ತಷ್ಟು ಆಳಗೊಳಿಸಿದರೂ ನೀರಿನ ಪ್ರಮಾಣ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ತೆರೆದ ಬಾವಿಯಿಂದ ಕೊಳವೆಬಾವಿಯತ್ತ ಒಲವು ಹರಿಸಲಾರಂಭಿಸಿದ್ದಾರೆ.

ಕೊಳವೆಬಾವಿಗೆ ನಿಯಂತ್ರಣವಿಲ್ಲ: ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊಳವೆಬಾವಿ ನಿರ್ಮಾಣಗೊಳ್ಳುತ್ತಿದ್ದರೂ, ಜಿಲ್ಲಾಡಳಿತ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ವರ್ಷ ಕೊಳವೆಬಾವಿ ನಿರ್ಮಾಣಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಕೊಳವೆಬಾವಿಗಳ ನಿರ್ಮಾಣ ಕಡಿಮೆಯಾಗಿತ್ತು. ಕಡ್ಡಾಯ ಜಲಸಂರಕ್ಷಣಾ ಕಾರ್ಯ ಕೈಗೊಂಡಲ್ಲಿ ಮಾತ್ರ ಹೊಸ ಮನೆ, ಕಟ್ಟಡಗಳಿಗೆ ಪರವಾನಗಿ ಲಭಿಸುವ ಕೇರಳ ಕಟ್ಟಡ ಕಾಯ್ದೆಯೂ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪರವಾನಗಿ ಲಭಿಸಲು ಮಾತ್ರ ಕಾಟಾಚಾರಕ್ಕೆ ಜಲಮರುಪೂರಣ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು, ನಂತರ ಇದನ್ನು ಪರಿಶೀಲಿಸುವ ಕಾರ್ಯ ಸ್ಥಳೀಯಾಡಳಿತ ನಡೆಸುತ್ತಿಲ್ಲ.

ಪರಿಹಾರವೇನು?: ಮಳೆಗಾಲ ಆರಂಭಕ್ಕೆ ಬಹಳಷ್ಟು ಮುಂಚಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿದ್ದರೂ, ಜಲಸಂರಕ್ಷಣೆ ಬಗ್ಗೆ ಜನತೆಗೆ ಸಕಾಲಕ್ಕೆ ಮಾಹಿತಿ ಲಭಿಸದಿರುವುದರಿಂದ ಜಾಗೃತಿ ಕಾರ್ಯ ಯಶಸ್ವಿಯಾಗುತ್ತಿಲ್ಲ. ಕಟ್ಟಡ ನಿರ್ಮಾಣ ಕಾಯ್ದೆಯನ್ವಯ ಜಲಸಂರಕ್ಷಣಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜತೆಗೆ ಅಂತರ್ಜಲ ಹೆಚ್ಚಳದ ಬಗ್ಗೆ ಜನಜಾಗೃತಿ ಕಾರ್ಯ ವ್ಯಾಪಕಗೊಳಿಸುವುದು ಅನಿವಾರ್ಯ ಎಂದು ಜಲತಜ್ಞರು ಅಭಿಪ್ರಾಯಪಡುತ್ತಾರೆ.

ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ ತಾಲೂಕು ಸಹಿತ ವಿವಿಧೆಡೆ ಅಂತರ್ಜಲಮಟ್ಟ ಗಣನೀಯವಾಗಿ ಕುಸಿದಿದೆ. ತೆರೆದ ಬಾವಿಗಳಲ್ಲಿ ಶೇ.48ರಷ್ಟು ನೀರಿನ ಮಟ್ಟ ಕುಸಿದಿದ್ದರೆ, ಕೊಳವೆಬಾವಿಗಳಲ್ಲಿ ಕಳೆದ ಹತ್ತು ವರ್ಷಗಳ ಸರಾಸರಿಯನ್ವಯ ಶೇ. 42ರಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಜಲಮರುಪೂರಣದೊಂದಿಗೆ ಸಮಗ್ರ ಜಲಸಂರಕ್ಷಣಾಕಾರ್ಯದಿಂದ ಮಾತ್ರ ಅಂತರ್ಜಲಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ.
ಎಂ. ಸೀತಾರಾಮ ಭಟ್,
ಭೂಗರ್ಭ ಜಲ ಇಲಾಖೆ ಜಿಲ್ಲಾ ಅಧಿಕಾರಿ