- ಸೇತುವೆಯ ಎರಡೂ ಬದಿ ರಕ್ಷಣಾ ಕಂಬಿಗಳಿಗೆ ಜಲ ಸಸ್ಯಗಳು ಅಡರಿ ನಿಂತಿವೆ.
- ವಿಷಜಂತುಗಳ ಹಾವಳಿ ಹೆಚ್ಚಿ, ಹಸಿರು ಹಾವುಗಳು ಕಾಣಿಸುತ್ತಿವೆ.
ಕಂಪ್ಲಿ: ಮೂರನೇ ದಿನವೂ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ತುಂಗಭದ್ರಾ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗುವುದನ್ನು ಜನ ಕಾಯುತ್ತಿದ್ದಾರೆ.
ಇದನ್ನೂ ಓದಿ: ಖಾನಾಪೂರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ
ಸೇತುವೆಯ ಎರಡೂ ಬದಿ ರಕ್ಷಣಾ ಕಂಬಿಗಳಿಗೆ ಜಲ ಸಸ್ಯಗಳು ಅಡರಿ ನಿಂತಿವೆ. ಇವುಗಳಿಂದ ಕಂಬಿಗಳ ಮೇಲೆ ಒತ್ತಡ ಬೀಳುತ್ತಿದೆ. ಕೋಟೆಯ ದ್ವಾರದ ಸೇತುವೆ ಬಲಭಾಗದಲ್ಲಿ ದಟ್ಟವಾಗಿ ಜಲಸಸ್ಯಗಳು ಅಡರಿದ್ದು, ವಿಷಜಂತುಗಳ ಹಾವಳಿ ಹೆಚ್ಚಿದೆ. ಹಸಿರು ಹಾವುಗಳು ಕಾಣಿಸುತ್ತಿವೆ.
ಬಿಳಿ ಕೊಕ್ಕರೆಗಳು ಜಲಸಸ್ಯಗಳ ಮೇಲೆ ಬೀಡು ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿವೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಕಟ್ಟಿ ನಿಯಂತ್ರಿಸಿದ್ದರೂ ನದಿ ನೋಡುವ ಜನರ ಉತ್ಸಾಹ ಕುಗ್ಗಿಲ್ಲ. ಸೇತುವೆ ಬಳಿ ಮೆಕ್ಕೆಜೋಳದ ತೆನೆ, ಮಂಡಕ್ಕಿ, ಮಿರ್ಚಿ, ನಾನಾ ತರಹದ ಕಡಲೆ ಮಾರುವ ಅಂಗಡಿಗಳು ತಲೆಯೆತ್ತಿವೆ.
ಪಂಪಾಪತಿ ದೇವಸ್ಥಾನ ಬಳಿ ನದಿಯ ಹಿನ್ನೀರು ನುಗ್ಗಿ ರಸ್ತೆ ಮೇಲೆ ನೀರು ಹರಿದಿದೆ. ರೈತರು, ಕಾರ್ಮಿಕರು, ಮೀನುಗಾರರು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದನ್ನೇ ಕಾಯುತ್ತಿದ್ದಾರೆ. ಬೆಳಗೋಡ್‌ಹಾಳ್ ಭಾಗದ ನದಿಪಾತ್ರದ ತಗ್ಗುಪ್ರದೇಶದ 60ಎಕರೆಯಷ್ಟು ಭತ್ತ ನದಿ ಜಲಾವೃತಗೊಂಡಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆದ ಮೇಲಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಬೆಳಗೋಡ್ ನೋಡಲ್ ಅಧಿಕಾರಿ ಡಾ.ಸಿ.ಆರ್.ಅಭಿಲಾಷ ತಿಳಿಸಿದರು.
ನದಿ ನೀರಿಗೆ ಅಕಸ್ಮಿಕ ಬಿದ್ದಿದ್ದ ಮೀನುಗಾರ ಕರ್ಪಣ್ಣ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆದಿದ್ದು, ಗುಣಮುಖರಾಗಿದ್ದಾರೆ. ಕೋಟೆಯಲ್ಲಿ ತಲೆನೋವು, ಜ್ವರಪೀಡಿತನೊಬ್ಬನ ರಕ್ತ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಬಿಎಚ್‌ಇಒ ಕೆ.ಶೋಭಾ ತಿಳಿಸಿದ್ದಾರೆ. ನಾಲ್ವರು ನೋಡಲ್ ಅಧಿಕಾರಿಗಳು ಪ್ರವಾಹಪೀಡಿತ ಪ್ರದೇಶಗಳ ಮೇಲೆ ಲಕ್ಷ್ಯವಹಿಸಿದ್ದಾರೆ ಎಂದು ತಹಸೀಲ್ದಾರ್ ಎಸ್.ಶಿವರಾಜ ತಿಳಿಸಿದ್ದಾರೆ.