ಅನ್ಸಾರ್ ಇನೋಳಿ ಉಳ್ಳಾಲ
ಹರೇಕಳ- ಅಡ್ಯಾರ್ ಸೇತುವೆ ನಿರ್ಮಾಣ ಬಳಿಕ ಹರೇಕಳ ಗ್ರಾಮ ಪ್ರಸಿದ್ಧಿಗೆ ಬಂದಿದೆ. ಈ ಗ್ರಾಮಕ್ಕೆ ಇನ್ನಷ್ಟು ಪ್ರಸಿದ್ಧಿ ತರುವ ನಿಟ್ಟಿನಲ್ಲಿ ಜನಾಕರ್ಷಣೆಗೆ ಯೋಜನೆ ರೂಪಿಸಲಾಗಿದ್ದು, ಪ್ರಥಮ ಹಂತದ ನದಿ ಬದಿ ರಸ್ತೆ ಯೋಜನೆ ಪ್ರಗತಿಯಲ್ಲಿದೆ.
ಅವಳಿ ಗ್ರಾಮ ಎನಿಸಿರುವ ಹರೇಕಳ-ಪಾವೂರಿಗೆ ನೇತ್ರಾವತಿ ನದಿ ಕಿರೀಟವಿದ್ದಂತೆ. ಹಿಂದಿನಿಂದಲೂ ಈ ಎರಡು ಗ್ರಾಮಗಳ ನದಿ ತಟದಲ್ಲಿ ಹೇರಳ ಮರಳಿತ್ತು. ಆ ಸಮಯದಲ್ಲಿ ನದಿಗಿಂತಲೂ ತಟ ವಿಸ್ತಾರವಾಗಿದ್ದರಿಂದ ದೊಡ್ಡಮಟ್ಟದ ಕ್ರೀಡಾಕೂಟಗಳು, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳು ನದಿ ತಟದಲ್ಲಿದ್ದ ಮರಳಲ್ಲೇ ನಡೆಯುತ್ತಿದ್ದವು. ಇಲ್ಲೂ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿದ್ದವು. ಒಂದು ಹಂತದಲ್ಲಿ ಗ್ರಾಮೀಣ ಭಾಗದ ಜನರಿಗೆ ನದಿ ತಟವೇ ಮೈದಾನದಂತಿತ್ತು.
ಆ ಕಾಲದಲ್ಲಿ ಬಸ್ ಸಹಿತ ಇತರ ವಾಹನಗಳ ಸಂಖ್ಯೆ ವಿರಳವಾಗಿದ್ದರಿಂದ ದೋಣಿಗಳಲ್ಲೇ ಹೊರ ಊರಿನ ಜನರು ಈ ಭಾಗಕ್ಕೆ ಬಂದು ಹೋಗುತ್ತಿದ್ದರು. ಕಪ್ಪೆಚಿಪ್ಪು ಹೆಕ್ಕಲೂ ದೂರದೂರಿನ ಜನ ಇತ್ತೀಚಿನ ವರ್ಷಗಳವರೆಗೂ ಬರುತ್ತಿದ್ದರು. ಕೆಲವರಿಗೆ ಇಲ್ಲಿ ಉಚಿತವಾಗಿ ಸಿಗುತ್ತಿದ್ದ ಕಪ್ಪೆ ಚಿಪ್ಪು ಜೀವನಕ್ಕೆ ಆಧಾರವೂ ಆಗಿತ್ತು. ಆದರೆ ಕಾಲಕ್ರಮೇಣ ಮರಳು ಮಾಫಿಯಾದ ಕೆಂಗಣ್ಣು ಬಿದ್ದು ನದಿ ವಿಸ್ತಾರವಾಗಿ ಕೊನೆಗೊಂದು ದಿನ ಇಲ್ಲಿ ಮರಳೇ ಮಾಯವಾಯಿತು. ಪ್ರಸ್ತುತ ದಿನಗಳಲ್ಲಿ ಇಲ್ಲಿ ಮರಳು ಹುಡುಕಿದರೆ ಕಲ್ಲಿನ ರಾಶಿಯೇ ಸಿಗುತ್ತದೆ ಎನ್ನುವುದು ಸತ್ಯ.
ಸೌಂದರ್ಯ ಹೆಚ್ಚಿಸಿದ ಸೇತುವೆ
ಹರೇಕಳ ಗ್ರಾಮದಿಂದ ಕಳೆದು ಹೋಗಿದ್ದ ಸೌಂದರ್ಯ ಸೇತುವೆ ನಿರ್ಮಾಣದ ಮೂಲಕ ಮತ್ತೆ ಹಿಂದಿರುಗುವ ಲಕ್ಷಣಗಳು ಗೋಚರಿಸಿವೆ. ಹರೇಕಳ-ಅಡ್ಯಾರ್ ಸಂಪರ್ಕ ಸೇತುವೆ ನಿರ್ಮಾಣದ ಬಳಿಕ ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಆಸುಪಾಸಿನ ಗ್ರಾಮಸ್ಥರಿಗೆ ಮಂಗಳೂರು ಸನಿಹವಾಗಿದೆ. ನದಿ ತಟಕ್ಕೆ ಕಲ್ಲು ಕಟ್ಟಿ ಹಸಿರೀಕರಣಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ಮಾದರಿಯಲ್ಲಿ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೂರದೂರಿನಿಂದ ಜನರು ಸಂಜೆ ವೇಳೆ ವಾಹನಗಳಲ್ಲಿ ಆಗಮಿಸಿ ವಿವರಿಸುವುದು, ಸಮಯ ಕಳೆಯುವುದು ಪ್ರತಿದಿನ ಕಂಡುಬರುವ ಸಾಮಾನ್ಯ ದೃಶ್ಯ. ಮತ್ಸೃಪ್ರಿಯರು ಸಂಜೆ ಬಳಿಕ ಗಾಳ ಹಾಕಿ ಮತ್ಸೃ ಬೇಟೆಯಾಡುವುದು ಸಾಮಾನ್ಯವಾಗಿದೆ.
ಇಲ್ಲಿನ ಸೌಂದರ್ಯ ಮತ್ತಷ್ಟು ಹೆಚ್ಚಿಸಿ ಜನಕಾರ್ಷಣೆಯ ತಾಣವಾಗಿಸುವ ನಿಟ್ಟಿನಲ್ಲಿ ನದಿತಟದಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಹರೇಕಳದಿಂದ ಕೊಜಪಾಡಿವರೆಗೆ ಸುಮಾರು 600 ಮೀಟರ್‌ನಷ್ಟು ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ನಡುವಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಆಗಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ನಡೆದಾಡಲು ಹಾಗೂ ಲಘು ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ. ಈ ಯೋಜನೆ ಯಶಸ್ವಿಯಾದಲ್ಲಿ ನದಿ ಬದಿಯಿಂದಲೇ ಹರೇಕಳದಿಂದ ಇನೋಳಿಯಾಗಿ ಸಜಿಪಕ್ಕೆ ನೇರ ರಸ್ತೆ ನಿರ್ಮಾಣ ಯೋಜನೆ ರೂಪಿಸಲಾಗಿದೆ. ಇವೆಲ್ಲ ಕಾರ್ಯಗತಗೊಂಡರೆ ಹರೇಕಳ ಮತ್ತು ಪಾವೂರು ಗ್ರಾಮಗಳು ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ.
ಹರೇಕಳ ಪಾವೂರಿನಲ್ಲಿರುವ ನದಿಗಳು, ಮಧ್ಯದಲ್ಲಿರುವ ದ್ವೀಪಗಳು, ನದಿತಟ ಎಲ್ಲವೂ ಜನಕಾರ್ಷಣೆಯ ಕೇಂದ್ರವಾಗಿದೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಅವಕಾಶ ಇದೆ. ಈ ಬಗ್ಗೆ ಜನಪ್ರತಿನಿಧಿಗಳು, ಇಲಾಖಾ ಮಟ್ಟದ ಅಧಿಕಾರಿಗಳು ಉತ್ಸಾಹ ತೋರಬೇಕು.
-ದಿನೇಶ್ ನಡಾರ್
ವಿನ್ಯಾಸಗಾರ, ಪ್ರವಾಸೋದ್ಯಮ ತಾಣ
ಹರೇಕಳ ಗ್ರಾಮ ನೇತ್ರಾವತಿ ನದಿಯಿಂದಾಗಿ ಹಿಂದೆ ಪ್ರಾಕೃತಿಕವಾಗಿ ಸೌಂದರ್ಯದಿಂದ ಕೂಡಿತ್ತು, ಪ್ರಸ್ತುತ ಸೇತುವೆ ನಿರ್ಮಾಣದ ಬಳಿಕ ಜನಸಂಚಾರ ಹೆಚ್ಚಾಗಿದೆ. ಪ್ರವಾಸಿಗರನ್ನು ಸೆಳೆಯಲು ಉತ್ತಮ ಅವಕಾಶ ಇದ್ದು ಪೂರ್ಣಪ್ರಮಾಣದಲ್ಲಿ ನದಿಬದಿ ರಸ್ತೆ ನಿರ್ಮಾಣ ಸಹಿತ ಇತರ ಸವಲತ್ತು ಆಗಬೇಕು.
-ರಫೀಕ್ ಹರೇಕಳ ಸ್ಥಳೀಯ ನಿವಾಸಿ