ಅವಧಿಗೂ ಮುನ್ನವೇ ಬತ್ತಿದೆ ಜೀವನದಿ ಶಾಂಭವಿ

ಹರಿಪ್ರಸಾದ್ ನಂದಳಿಕೆ
ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಜೀವನದಿ ಶಾಂಭವಿ ಈ ಬಾರಿ ಬಹು ಬೇಗನೆ ಬತ್ತಿದ್ದು ಜನರಲ್ಲಿ ಆತಂಕ ಎದುರಾಗಿದೆ.
ಸಾಣೂರು, ಬೋಳ, ಸಚ್ಚೇರಿಪೇಟೆ, ಸಂಕಲಕರಿಯ, ಮುಂಡ್ಕೂರು, ಪಲಿಮಾರು ಭಾಗದಲ್ಲಿ ಹರಿದು ಸಮುದ್ರ ಸೇರುವ ಶಾಂಭವಿ ನದಿ ಬತ್ತಿ ಹೋಗಿ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಮಾರ್ಚ್, ಏಪ್ರಿಲ್ ಅಂತ್ಯದವರೆಗೂ ನದಿ ನೀರು ಹರಿಯುತ್ತಿದ್ದರೂ ಈ ಬಾರಿ ಅಂಥ ದೃಶ್ಯ ಕಾಣಸಿಗುವುದು ಬಹುತೇಕ ಅನುಮಾನ.

ಶಾಂಭವಿ ನದಿಗೆ ಬೋಳ, ಪಾಲಿಂಗೇರಿ, ಸಚ್ಚೇರಿಪೇಟೆ, ಸಂಕಲಕರಿಯ ಮೊದಲಾದ ಕಡೆ ಅಣೆಕಟ್ಟು ನಿರ್ಮಿಸಿದ್ದರೂ ಅಲ್ಲೆಲ್ಲೂ ನೀರಿನ ಹೆಚ್ಚಿನ ಪ್ರಮಾಣವಿಲ್ಲ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವ ಕೃಷಿಕರು ಇದೀಗ ಸೆಪ್ಟೆಂಬರ್ ತಿಂಗಳಲ್ಲೇ ತಯಾರಿ ನಡೆಸುವಂತಾಗಿದೆ. ಸಂಕಲಕರಿಯದಲ್ಲಿ ಸಾಮಾಜಿಕ ಕಳಕಳಿಯ ಯುವಕ ಸುಧಾಕರ ಸಾಲ್ಯಾನ್ ಏಕಾಂಗಿಯಾಗಿ ಹೋರಾಟ ಮಾಡಿ ಸ್ಥಳೀಯ ಶಾಸಕರು, ಊರಿನ ಅಕ್ಕಪಕ್ಕದ ಕೃಷಿಕರು ಹಾಗೂ ನೀರಾವರಿ ಇಲಾಖೆ ನೆರವಿನಿಂದ ಅಣೆಕಟ್ಟು ನಿರ್ವಹಣೆ ನಡೆಸಿ ಪ್ರತಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವ ಮೂಲಕ ಸುಮಾರು 20 ಕಿ.ಮೀ. ವ್ಯಾಪ್ತಿಯವರೆಗೆ ನದಿ ನೀರು ನಿಲ್ಲುವಂತೆ ಮಾಡಿದ್ದರು. ಈ ಬಾರಿ ನದಿ ನೀರು ಸಂಪೂರ್ಣ ಆವಿಯಾಗಿದೆ ಎಂದು ಸುಧಾಕರ್ ಸಾಲ್ಯಾನ್ ತಿಳಿಸಿದ್ದಾರೆ.

ಶಾಂಭವಿ ನದಿಯುವ ಹರಿಯುವ ಬೋಳ, ಸಾಣೂರು, ಸಚ್ಚೇರಿಪೇಟೆ, ಪೊಸ್ರಾಲು, ಆಲಗುಂಡಿ, ಇನ್ನಾ, ಮುಂಡ್ಕೂರು ಹಾಗೂ ಪಲಿಮಾರು ಭಾಗದಲ್ಲಿ ಶಾಂಭವಿ ನದಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಕೆಲವು ಕಡೆ ಶಾಂಭವಿ ಸಂಪೂರ್ಣ ಬತ್ತಿ ಹೋಗಿದೆ.

ಬಾವಿ ನೀರು ಒರತೆಯೂ ಕಡಿಮೆ: ಶಾಂಭವಿ ನೀರು ಬತ್ತಿದ್ದರಿಂದ ಪಕ್ಕದ ಬಾವಿಗಳಲ್ಲೂ ಒರತೆ ಕಡಿಮೆಯಾಗಿದೆ. ಈಗಾಗಲೇ ಜಲಕ್ಷಾಮದ ಬಗ್ಗೆ ಪ್ರತಿಯೊಂದು ಪಂಚಾಯಿತಿಗಳೂ ಅಲರ್ಟ್ ಆಗುವ ಪರಿಸ್ಥಿತಿ ಎದುರಾಗಿದೆ. ಮುಂಡ್ಕೂರು ಗ್ರಾಮ ಪಂಚಾಯಿತಿಯಲ್ಲಿ ಸ್ವಜಲಧಾರಾ ಯಶಸ್ವಿ ಯೋಜನೆ ಮೂಲಕ ಜಾರಿಗೆಕಟ್ಟೆ ಅಲಂಗಾರು ಬಳಿ ನದಿಯಲ್ಲಿ ಬೃಹತ್ ಬಾವಿ ತೋಡಿ ಇಡೀ ಪಂಚಾಯಿತಿ ವ್ಯಾಪ್ತಿಗೆ ನೀರುಣಿಸುವ ಕಾರ್ಯ ಮಾಡುತ್ತಿದೆ. ಆದರೆ ಈ ಬಾರಿ ಜನ ಹಾಗೂ ಪಂಚಾಯಿತಿ ನೀರಿನ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವ ಅನಿವಾರ್ಯತೆ ಎದುರಾಗಿದೆ.

ಬಿಸಿಲ ಬೇಗೆಯಿಂದ ನದಿ ನೀರು ಸಂಪೂರ್ಣ ಬತ್ತಿದೆ. ಹೀಗಾಗಿ ಕೃಷಿ ಚಟುವಟಿಕೆಗೆ ತುಂಬ ತೊಂದರೆಯಾಗಲಿದೆ. ಈ ಬಾರಿ ಕುಡಿಯುವ ನೀರಿಗೂ ಬಹು ಬೇಗನೆ ಸಮಸ್ಯೆ ಬರಲಿದೆ.
|ಸದಾನಂದ ಶೆಟ್ಟಿ, ಕೃಷಿಕರು.

ಜನರಿಗೆ ನೀರು ಅತ್ಯಮೂಲ್ಯವಾಗಿದ್ದು ಇದರ ಮಿತ ಬಳಕೆಯಾಗಬೇಕಿದೆ. ನದಿ ನೀರು ಬಹುಬೇಗನೇ ಬತ್ತಿ ಹೋಗುತ್ತಿದ್ದು ಹೀಗೆಯೇ ಮುಂದುವರಿದಲ್ಲಿ ನೀರಿಗಾಗಿ ನಾವು ಪರದಾಟ ನಡೆಸುವಂತಾಗುತ್ತದೆ. ಪ್ರತಿಯೊಂದು ಅಣೆಕಟ್ಟಿನ ಸರಿಯಾದ ನಿರ್ವಹಣೆ ನಡೆಯಬೇಕಾಗಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು.
|ಸುಧಾಕರ್ ಸಾಲ್ಯಾನ್, ಐಕಳ ಗ್ರಾಪಂ ಸದಸ್ಯ.