ಭೀಕರ ಬರದ ದವಡೆಗೆ ಸಿಲುಕಿ ಜಾನುವಾರು ಮಾರಾಟ

ಚಿಕ್ಕಮಗಳೂರು: ನೀರಿಗಾಗಿ ಭೂಮಿಯೇ ಬಾಯಿ ತೆರೆಯುವಷ್ಟರ ಮಟ್ಟಿಗೆ ಬಿಸಿಲು ಸುಡುತ್ತಿದೆ. ಜಿಲ್ಲೆಯಲ್ಲಿ ಬರದ ದವಡೆಗೆ ಮನುಷ್ಯರಷ್ಟೇ ಸಿಕ್ಕಿಲ್ಲ, ಜಾನುವಾರುಗಳೂ ನೀರು, ಮೇವಿಲ್ಲದೆ ತತ್ತರಿಸಿವೆ.

ಹಳ್ಳ-ಕೊಳ್ಳ, ನದಿಗಳು ಬರಿದಾಗತೊಡಗಿವೆ. ಹಿಂಗಾರು ಮಳೆ ಬಾರದೆ ಗೋಮಾಳ, ಅಡವಿಗಳಲ್ಲಿ ಹಸಿ ಮೇವು ಚಿಗುರೊಡೆದಿಲ್ಲ. ಇದ್ದ ಒಣ ಮೇವೂ ಖಾಲಿಯಾಗುತ್ತಿದೆ. ಪ್ರೀತಿಯಿಂದ ಸಾಕಿ ಸಲಹಿದ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ರೈತರು ಅವುಗಳನ್ನು ಇಟ್ಟುಕೊಳ್ಳಲಾಗದೆ, ಮಾರಾಟ ಮಾಡಲೂ ಆಗದೆ ಯಾತನೆ ಅನುಭವಿಸುತ್ತಿದ್ದಾರೆ. ಕೆಲ ರೈತರು ಬರದ ದವಡೆ ತಪ್ಪಿಸಿಕೊಳ್ಳಲು ಸಂಕಟದಿಂದಲೇ ಮಾರಾಟ ಮಾಡುತ್ತಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಸಾದರಹಳ್ಳಿ ಸೇರಿ ಜಿಲ್ಲೆಯ ಅರ್ಧಭಾಗದ ಹಳ್ಳಿಗಳಲ್ಲಿ ಭೀಕರ ಬರದ ಛಾಯೆ ರೈತರನ್ನು ಹೈರಾಣಾಗಿಸಿದೆ. ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಇಲ್ಲಿನ ಕೃಷಿಕರಿಗೆ ಜಾನುವಾರುಗಳದ್ದೇ ದೊಡ್ಡ ಚಿಂತೆಯಾಗಿದೆ.

ಮುಂಗಾರು ಪೂರ್ವ ರೇವತಿ ಮಳೆ ಬರಲಿಲ್ಲ. ನಂತರ ಹೊಸ ಮಳೆಗಳಾದ ಅಶ್ವಿನಿ, ಭರಣಿಯೂ ಕೈಕೊಟ್ಟಿವೆ. ಕೃತಿಕಾ ಮಳೆಯ ಅರ್ಧ ಅವಧಿ ಮುಗಿಯುತ್ತಿದೆ. ಇನ್ನೇನಿದ್ದರೂ ಭರಣಿ ಮಳೆ ಕಡೆ ನೋಡಬೇಕಿದೆ. ಭರಣಿ ಮಳೆ ಬರುವಷ್ಟರಲ್ಲಿ ಬರದ ದವಡೆಗೆ ಸಿಲುಕಿರುವ ಹಳ್ಳಿಗರ ಪರಿಸ್ಥಿತಿ ಶೋಚನೀಯವಾಗಲಿದೆ. ನೀರಿನ ಬರದಿಂದ ನಿತ್ಯಬಳಕೆ, ಅಡುಗೆ, ಸ್ನಾನ, ಶೌಚಕ್ಕೂ ನೀರಿನ ಕೊರತೆ ಉಂಟಾಗಿದೆ.

ನಾಲ್ಕು ಲಕ್ಷ ಜಾನುವಾರು: ಜಿಲ್ಲೆಯಲ್ಲಿ 4.8 ಲಕ್ಷ ಜಾನುವಾರುಗಳಿವೆ. ಇಷ್ಟೊಂದು ಪ್ರಮಾಣದ ಜಾನುವಾರುಗಳಿಗೆ ಪ್ರತಿದಿನ ಮೇವು, ನೀರು ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ. ಮಲೆನಾಡಲ್ಲಿ ಅಲ್ಪಸ್ವಲ್ಪ ಮೇವು ಸಿಗುತ್ತಿದೆ. ಇಲ್ಲಿಯೂ ಕೆಲವೆಡೆ ಮೇವು, ನೀರಿನ ಸಮಸ್ಯೆ ಇದೆ. ಆದರೆ ಬಯಲುಸೀಮೆಯ ಲಕ್ಯಾ, ಕಳಸಾಪುರ, ಸಖರಾಯಪಟ್ಟಣ, ಕಡೂರು, ಪಂಚನಹಳ್ಳಿ, ಯಗಟಿ, ಹೀರೇನಲ್ಲೂರು ಹಾಗೂ ತರೀಕೆರೆ, ಅಜ್ಜಂಪುರ ತಾಲೂಕುಗಳ ಭಾಗಶಃ ಪ್ರದೇಶದಲ್ಲಿ ಜಾನುವಾರು ಸಾಕಲು ರೈತರು ಹೆಣಗಾಡುತ್ತಿದ್ದಾರೆ.

ಹಾಲು ಉತ್ಪಾದನೆ ಕ್ಷೀಣ: ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಕಾಡು, ಗೋಮಾಳಗಳಲ್ಲಿ ಮೇವಿಲ್ಲ. ಕಳೆದ ವರ್ಷವೂ ಮಳೆ ಸರಿಯಾಗಿ ಆಗದ ಕಾರಣ ಒಣ ಮೇವು ಸಾಕಷ್ಟಿಲ್ಲ. ಹೀಗಾಗಿ ಮುಂಗಾರು ಮಳೆಯನ್ನೇ ನಂಬಿದ್ದ ಹೈನೋದ್ಯಮಕ್ಕೂ ಹಿನ್ನಡೆಯಾಗಿದೆ. ಮೇವು, ನೀರಿನ ಕೊರತೆಯಿಂದ ಹಸುಗಳು ಬಡಕಲಾಗುತ್ತಿವೆ. ಹಾಗಾಗಿ ಹಾಲು ಉತ್ಪಾದನೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸಾಲ ಮಾಡಿ ಹಸು ತಂದವರು ಸಾಲ ಮರುಪಾವತಿ ಬಗ್ಗೆ ಚಿಂತಿತರಾಗಿದ್ದಾರೆ. ಸರಿಯಾದ ಮೇವು, ಶುದ್ಧ ನೀರು ದೊರೆಯದಿರುವುದರಿಂದ ಹಸುಗಳಿಗೆ ಚಪ್ಪೆರೋಗ ಕಾಣಸಿಕೊಳ್ಳತೊಡಗಿದೆ. ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಜಾನುವಾರುಗಳು ಬಡಕಲಾಗುತ್ತಿವೆ. ಸಣ್ಣ ಕರುಗಳೂ ಮಂಕಾಗಿವೆ.

ಸಂಕಟದಿಂದ ಮಾರಾಟ ಮಾಡಿದೆ: ಎರಡು ವರ್ಷದ ಹಿಂದೆ ಬ್ಯಾಂಕಲ್ಲಿ ಸಾಲ ಮಾಡಿ ತಂದಿದ್ದ ಎರಡು ಹಸುಗಳನ್ನು ಅವುಗಳ ಗೋಳು ನೋಡಲಾರದೆ ಸಂಕಟದಿಂದ ಮಾರಾಟ ಮಾಡಿದೆ. ಹಾಲಿನ ದರ ಅಷ್ಟಕ್ಕಷ್ಟೇ ಇದೆ. ಬರದಿಂದ ಹಾಲಿನ ದರವೇನೂ ಹೆಚ್ಚಾಗಿಲ್ಲ. ಹಸುಗಳು ನೀರು, ಮೇವಿಲ್ಲದೆ ಸೊರಗುತ್ತಿದ್ದವು. ಅವುಗಳು ನನ್ನ ಕಣ್ಮುಂದೆ ಸಾಯುವುದು ಬೇಡವೆಂದು ಮಾರಾಟ ಮಾಡಿ ಬ್ಯಾಂಕ್ ಸಾಲ ಕಟ್ಟಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ರೈತರು ಬದುಕುವುದು ತುಂಬ ಕಷ್ಟವಾಗಿದೆ ಎಂದು ಸಾದರಹಳ್ಳಿಯ ಗೌರಮ್ಮ ನಿಟ್ಟುಸಿರು ಬಿಟ್ಟರು.

ಹಳ್ಳಿ ಸಹವಾಸ ಬೇಡ ಎನಿಸಿದೆ: ಪದವಿ ಶಿಕ್ಷಣ ಮುಗಿದ ನಂತರ ಹೈನೋದ್ಯಮ ಮಾಡಿ ಜೀವನ ಮಾಡಬಹುದೆಂದು ಮೂರು ಜಾನುವಾರು ಖರೀದಿಸಿ ಸಾಕಣೆ ಮಾಡುತ್ತಿದ್ದೆ. ಇಂಥ ಬರದ ಪರಿಸ್ಥಿತಿಯಲ್ಲಿ ಹಸು ಸಾಕುವುದು ಕಷ್ಟವಾಗಿದೆ. ಎಲ್ಲ ಬಿಟ್ಟು ನಗರಕ್ಕೆ ವಲಸೆ ಹೋಗಲು ನಿರ್ಧರಿಸಿದ್ದೇನೆ ಎಂದು ಬೇಸರದಿಂದ ಹೇಳುತ್ತಾರೆ ಯುವಕ ಸಾದರಹಳ್ಳಿ ದಿನೇಶ್. ಒಂದು ಪೆಂಡಿ ಮೇವು ಖರೀದಿಸಲು 500 ರೂ. ಬೇಕು. ಮೇವು ಖರೀದಿಸಿ ಹಸು ಸಾಕಣೆ ಮಾಡುವುದು ಕಷ್ಟ. ನಗರದಲ್ಲಿ ಯಾವುದೆ ಕೆಲಸ ಮಾಡಿದರೂ ಪ್ರತಿದಿನ 300ರಿಂದ 500 ರೂ. ದುಡಿಯಬಹುದು. ಇಲ್ಲಿ ಹಸು ಸಾಕಣೆ ಮಾಡಿ ಸಾಲವನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಇವರು.

ಗೀರ್ ತಳಿ ಹಸುಗಳು ಕಂಗಾಲು: ಸಾದರಹಳ್ಳಿಯಲ್ಲಿ ನಬಾರ್ಡ್ ಯೋಜನೆಯಡಿ 46 ರೈತರು ಖರೀದಿಸಿದ ಗುಜರಾತಿನ ಗೀರ್ ತಳಿ ಹಸುಗಳು ಮೇವು-ನೀರಿನ ಸಮಸ್ಯೆಯಿಂದ ಕಂಗಾಲಾಗಿವೆ. ಒಂದೇ ಗ್ರಾಮದಲ್ಲಿ 100 ಗೀರ್ ತಳಿ ಹಸುಗಳಿವೆ. ಉತ್ಕೃಷ್ಟ ಪೋಷಕಾಂಶ ಹೊಂದಿರುವ ಗೀರ್ ತಳಿ ಹಸುವಿನ ಹಾಲಿಗೆ ಉತ್ತಮ ಬೇಡಿಕೆ ಇದೆ. ಖಾಸಗಿ ಡೇರಿಯೊಂದು ಎರಡು ವರ್ಷದಿಂದ ಹಾಲು ಖರೀದಿಸುತ್ತಿದೆ. ಆದರೆ ಸರಿಯಾಗಿ ಹಣ ಬಟವಾಡೆ ಮಾಡುತ್ತಿಲ್ಲವೆಂದು ದೂರುತ್ತಾರೆ ರೈತ ಯೋಗೀಶ್. ಜಾನುವಾರು ನಿರ್ವಹಣೆಗೆ ಖರ್ಚು ಮಾಡಿದ ಹಣವೂ ಮರಳಿ ಬರುತ್ತಿಲ್ಲ. ಹೀಗಾಗಿ ಹಲವು ರೈತರು ಗೀರ್ ತಳಿ ಹಸು ಮಾರಾಟ ಮಾಡಲು ಸಿದ್ಧರಾಗಿದ್ದಾರೆ ಎಂದು ನೋವಿನಿಂದ ಹೇಳಿದರು.

ರೋಹಿಣಿ ಬಂದ್ರೆ ಜೋಳ ಬಿತ್ತನೆ: ಅಶ್ವಿನಿ, ಭರಣಿ ಕೈಕೊಟ್ಟಿದ್ದು, ಕೃತಿಕಾ ಮಳೆ ಬರುವುದೂ ಹುಸಿಯಾಗುತ್ತಿದೆ. ಭರಣಿ ಬಂದರೆ ಮಾತ್ರ ಜೋಳ ಬಿತ್ತನೆ ಮಾಡಬಹುದು ಎನ್ನುತ್ತಾರೆ ಸಾದರಹಳ್ಳಿ ಹಿರಿಯ ರೈತ ನಿಂಗೇಗೌಡ. ಹಿಂಗಾರು ಮಳೆ ಉತ್ತಮವಾಗಿದ್ದರೆ ಇಷ್ಟೊತ್ತಿಗೆ ಭೂಮಿ ತಂಪಾಗಿ ಹಸನು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಪ್ರತಿವರ್ಷ ಈ ವೇಳೆಗೆ ಮುಂಗಾರು ಹತ್ತಿ ಸೇರಿ ವಿವಿಧ ಬೆಳೆ ಬಿತ್ತನೆ ಮಾಡುತ್ತಿದ್ದೆವು. ಈ ಬಾರಿ ಮುಂಗಾರು ಮುನಿಸಿಕೊಂಡಿದೆ. ಅಡವಿ, ಗೋಮಾಳದಲ್ಲಿ ಹಸಿ ಮೇವು ಬೆಳೆಯದೆ ಹಸುಗಳು ಕಂಗಾಲಾಗಿವೆ ಎಂದು ನೋವು ತೋಡಿಕೊಂಡರು.

ಶೌಚಕ್ಕೆ ಅರ್ಧ ಲೀ. ನೀರು!: ಸಾದರಹಳ್ಳಿ ಸೇರಿ ಹಲವು ಹಳ್ಳಿಗಳಲ್ಲಿ ನೀರಿನ ಕೊರತೆಯಿಂದ ಶೌಚಗೃಹ ಬಳಕೆ ಬಿಟ್ಟು ಬಯಲಿಗೆ ಹೋಗುವುದು ಜನರಿಗೆ ಅನಿವಾರ್ಯವಾಗಿದೆ. ಅಲ್ಲಿಗಾದರೂ ಅರ್ಧ ಲೀ.ಗಿಂತ ಹೆಚ್ಚಿನ ನೀರು ಕೊಂಡೊಯ್ಯುವಂತಿಲ್ಲ. ಹೀಗಾಗಿ ಬಹುತೇಕರು ಅರ್ಧ ಲೀ. ಬಾಟಲಿಯನ್ನು ಇಟ್ಟುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಡುಗೆ, ನಿತ್ಯಬಳಕೆ, ಸ್ನಾನದ ನೀರಿಗೆ ಎಂಥ ಕಷ್ಟ ಅನುಭವಿಸುತ್ತಾರೆಂಬುದನ್ನು ಸುಲಭವಾಗಿ ಊಹಿಸಬಹುದು.

Leave a Reply

Your email address will not be published. Required fields are marked *