ಗುಳ್ಯ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಕಳಸ: ನಕ್ಸಲ್ ಪೀಡಿತ ಪ್ರದೇಶ ಗುಳ್ಯಕ್ಕೆ ಮೂಲ ಸೌಲಭ್ಯ ಕಲ್ಪಿಸಲಿಲ್ಲ ಎನ್ನುವ ಕಾರಣಕ್ಕೆ ಗ್ರಾಮದ ಜನ ಲೋಕಸಭಾ ಚುನಾವಣೆ ಬಹಿಷ್ಕರಿಸಿದ್ದಾರೆ.

ಸಂಸೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಗಿರಿಜನ ಪಂಗಡದವರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಮೂಲ ಸೌಲಭ್ಯಗಳ ಕೊರತೆಗಳ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಜಿಪಂ ಅಧ್ಯಕ್ಷರು ಈ ಭಾಗದಲ್ಲಿ ಗ್ರಾಮ ವಾತ್ಸವ್ಯ ಮಾಡಿದ್ದರು. ಆ ಸಂದರ್ಭದಲ್ಲಿ ರಸ್ತೆ, ಸೇತುವೆಗಳನ್ನು ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದರಾದರೂ ನಂತರ ಮರೆತು ಬಿಟ್ಟರು.

ಇತ್ತೀಗಷ್ಟೆ ಈ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿದ್ದರು ಎಂಬ ವದಂತಿ ಹಬ್ಬಿತ್ತು. ಇದರ ಮಾಹಿತಿ ಪಡೆದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಲ್ಲದೇ ಗ್ರಾಮದ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳ ಗಮನಸೆಳೆಯುವ ಕೆಲಸ ಮಾಡುವ ಭರವಸೆಯನ್ನೂ ನೀಡಿದ್ದರು. ಅಲ್ಲದೆ ಎಎನ್​ಎಫ್ ಸಿಬ್ಬಂದಿ ಕೂಡ ಇಲ್ಲಿಗೆ ಬಂದು ಇಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಗ್ರಾಮದಲ್ಲಿರುವ ಸಮಸ್ಯೆಗಳ ವಿವರ ಪಡೆದುಕೊಂಡು ಹೋಗಿದ್ದರು. ಆದರೆ ಗ್ರಾಮದ ಯಾವ ಸಮಸ್ಯೆಗಳೂ ಬಗೆಹರಿದಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

ನಮ್ಮ ಮೂಲ ಸೌಲಭ್ಯಕ್ಕಾಗಿ ಎಷ್ಟೇ ಪ್ರಯತ್ನಪಟ್ಟರೂ ಸರ್ಕಾರ ನಮ್ಮತ್ತ ತಿರುಗಿ ನೋಡುತ್ತಿಲ್ಲ. ಹೀಗಾಗಿ ನಾವು ಮತದಾನ ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸುತ್ತಾರೆ. ನಮ್ಮನ್ನು ಕಡೆಕಣಿಸುತ್ತಿರುವ ಸರ್ಕಾರ ಮತ್ತು ಜನಪ್ರತಿನಿಧಿಗಳ ರ್ನಿಲಕ್ಷ್ಯ ಧೋರಣೆಗೆ ಬೇಸತ್ತು ಎಲ್ಲ ಕುಟುಂಬದವರೂ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಗ್ರಾಮದ 34 ಸದಸ್ಯರು ಪತ್ರದಲ್ಲಿ ಸಹಿಹಾಕಿ ತಿಳಿಸಿದ್ದಾರೆ.

ಗ್ರಾಮದ ಕೊರತೆಗಳು: ಗುಳ್ಯ ಗ್ರಾಮದ ಜನ ಭದ್ರಾ ನದಿಯ ಉಪನದಿ ದಾಟಲು ಸೇತುವೆ ಇಲ್ಲ. ಸ್ಥಳೀಯರೇ ಬೆತ್ತದಿಂದ ನಿರ್ವಿುಸಿದ ಸೇತುವೆ ಹಗ್ಗದ ಸೇತುವೆ ದಾಟಿ ಸಾಗಬೇಕಿದೆ. ಶಾಲೆ, ಆಸ್ಪತ್ರೆ, ಕಂದಾಯ, ಪೊಲೀಸ್ ಸೇರಿ ಯಾವುದೇ ಸೇವೆ ಪಡೆಯಲು ಈ ಸೇತುವೆ ದಾಟಲೇ ಬೇಕಿದೆ. ಇಲ್ಲಿನ ನಿವಾಸಿಗಳು ಭತ್ತ, ಅಕ್ಕಿ ಮೂಟೆಗಳೂ ಸೇರಿದಂತೆ ಅಗತ್ಯವಸ್ತುಗಳನ್ನು ಸುಮಾರು ಅರ್ಧ ಕಿಮೀ ಕಾಲು ದಾರಿಯಲ್ಲಿ ಹೊತ್ತು ಸೇತುವೆವರೆಗೂ ಸಾಗಿಸಬೇಕಿದೆ. ಗ್ರಾಮದ ಕೆಲವರ ಮನೆಗಳು ಜೋಪಡಿಗಳಂತಿದ್ದು, ಸರ್ಕಾರದ ಯಾವುದೇ ಆಶ್ರಯ ಯೋಜನೆಗಳ ಮನೆಗಳು ಈ ಗ್ರಾಮಗಳಿಗೆ ಮಂಜೂರು ಮಾಡಿಕೊಟ್ಟಿಲ್ಲ. ಕೆಲವರು ಜಮೀನು ಹೊಂದಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ.

ಗುಳ್ಯ ಗ್ರಾಮ ನಕ್ಸಲ್ ಪೀಡಿತ ಎಂಬುದು ಎಲ್ಲ ಇಲಾಖಾಧಿಕಾರಿಗಳಿಗೂ ತಿಳಿದಿದೆ. ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಬಂದ ಅನುದಾನ ಎಲ್ಲಿ ಹೋಯಿತು? ಇತ್ತೀಚೆಗೆ ನಕ್ಸಲರು ಭೇಟಿ ನೀಡಿ ಸಮಸ್ಯೆ ಸಮಸ್ಯೆಗಳನ್ನು ಕೇಳಿಕೊಂಡು ಹೋಗಿದ್ದಾರೆ. ಇದು ಗೊತ್ತಾಗಿ ಪೊಲೀಸರು ಭೇಟಿ ನೀಡಿ ವರದಿ ಮಾಡಿದ್ದಾರೆ. ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಮನವಿ ಮಾಡಿದ್ದೇವೆ. ಆದರೆ ಸಮಸ್ಯೆ ಪರಿಹಾರವಾಗಿಲ್ಲ. ನಮಗೆ ಮೂಲ ಸೌಲಭ್ಯ ನೀಡದಿರುವುದರಿಂದ ಚುನಾವಣೆ ಬಹಿಷ್ಕರಿಸಿದ್ದೇವೆ. | ವಾಸುದೇವ್, ಗುಳ್ಯ ಗ್ರಾಮದ ನಿವಾಸಿ