ನದಿಗೆ ವಿಷ, ಮೀನುಗಳ ಮಾರಣ ಹೋಮ

ಬಾಳೆಹೊನ್ನೂರು: ಹೇರೂರು ಗ್ರಾಪಂ ವ್ಯಾಪ್ತಿಯ ಶಾಂತಿಪುರ-ದೂಬ್ಳ ಕೈಮರದಲ್ಲಿ ಸೀತಾ ನದಿಗೆ ದುಷ್ಕರ್ವಿುಗಳು ವಿಷ ಹಾಕಿದ್ದು, ಸಾವಿರಾರು ಮೀನುಗಳು ಇನ್ನಿತರ ಜಲಚರಗಳು ಮೃತಪಟ್ಟಿವೆ.

ದೂಬ್ಳ ಕೈಮರದಿಂದ ಕುಂದೂರಿಗೆ ಹೋಗುವ ರಸ್ತೆಯ ಸೇತುವೆ ಸಮೀಪ ಭಾನುವಾರ ರಾತ್ರಿ ಮೈಲುತುತ್ತ ಕದಡಿ ನೀರಿಗೆ ಹಾಕಿದ್ದಾರೆ. ಮೀನುಗಳು ನೀರಿನಲ್ಲಿ ತೇಲುತ್ತಿದ್ದುದನ್ನು ಸೋಮವಾರ ಬೆಳಗ್ಗೆ ಸ್ಥಳೀಯರು ಗಮನಿಸಿದ್ದಾರೆ. ಕೂಡಲೆ ಜಯಪುರದ ನಾಡಕಚೇರಿ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆರ್​ಐ ನಾಗರಾಜ್, ಗ್ರಾಮಲೆಕ್ಕಾಧಿಕಾರಿ ರಮ್ಯಾ ಇತರರು ಆಗಮಿಸಿ ಪರಿಶೀಲಿಸಿದರು.

ಕೆಲವೆಡೆ ಸ್ಥಳೀಯರು ಕುಡಿಯಲು ನದಿಯ ನೀರನ್ನೇ ಬಳಸುತ್ತಿದ್ದಾರೆ. ನೀರಿಗೆ ಮೈಲುತುತ್ತ ಬೆರೆಸಿರುವ ಕಾರಣ ಸ್ಥಳೀಯರಲ್ಲಿ ಭೀತಿಯುಂಟಾಗಿದ್ದು, ಜಾನುವಾರುಗಳು ನೀರು ಕುಡಿದು ಸಾಯುವ ಆತಂಕ ಎದುರಾಗಿದೆ.