ನದಿ ಜಲಮಟ್ಟ ಕುಸಿತ

ಶ್ರವಣ್ ಕುಮಾರ್ ನಾಳ ಪುತ್ತೂರು
ವಾರದ ಹಿಂದೆ ಅಪಾಯಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿಯ ಉಪನದಿಗಳಲ್ಲಿ 2 ದಿನಗಳಿಂದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಪಶ್ಚಿಮಘಟ್ಟದಲ್ಲಿ ಸಂಭವಿಸಿದ ಭೂಕುಸಿತ, ಸೃಷ್ಟಿಯಾದ ಹೊಸ ನದಿ, ತೊರೆಗಳಲ್ಲೂ ನೀರಿನ ಹರಿಯುವಿಕೆಯಲ್ಲಿ ಕಡಿಮೆಯಾಗಿರುವುದು ನೀರಿನ ಪ್ರಮಾಣ ಕುಸಿಯಲು ಮೂಲ ಕಾರಣ ಎಂಬುದು ಪರಿಸರ ತಜ್ಞರ ವಾದ.

ಬೆಟ್ಟಪ್ರದೇಶಗಳಲ್ಲಿ ಮಳೆಗಾಲ ಸಂದರ್ಭ ಸುರಿಯುವ ನಿರಂತರ ಮಳೆ ಹುಲ್ಲುಗಾವಲು ಹಾಗೂ ಶೋಲಾ ಅರಣ್ಯಗಳ ಮೂಲಕ ಭೂ ಅಂತರಾಳದಲ್ಲಿ ಶೇಖರಣೆಗೊಂಡು ನಂತರ ನಿಧಾನವಾಗಿ ಬೆಟ್ಟಗಳ ಮೂಲಕ ಹರಿದು ನದಿಯಾಗಿ ಸಾಗರ ಸೇರುವುದು ರೂಢಿ. ಕಳೆದ ವರ್ಷ ಸಾಕಷ್ಟು ಮಳೆ ಸುರಿದು ನದಿ ಅಪಾಯ ಮಟ್ಟಕ್ಕಿಂತಲೂ ಎತ್ತರದಲ್ಲಿ ಹರಿದಿದ್ದರೂ, ಅಕ್ಟೋಬರ್ ಅಂತ್ಯದವರೆಗೂ ನೀರಿನ ಹರಿವಿತ್ತು. ನವಂಬರ್ ವೇಳೆ ನದಿಗಳಲ್ಲಿ ನೀರಿನ ಕೊರತೆ ಕಂಡುಬಂದಿತ್ತು. ಈ ಬಾರಿ ಕಂಡು ಕೇಳಿ ಅರಿಯದ ಮಟ್ಟದಲ್ಲಿ ನೀರು ಹರಿದರೂ, ಕಳೆದ ಒಂದು ವಾರದಿಂದ ಮತ್ತೆ ನೀರಿನ ಪ್ರಮಾಣ ಕಡಿಮೆಯಾಗಿದೆ.

ಬರಡು ನದಿಯಂತೆ ಕಾಣುವ ನಂದಿಬೆಟ್ಟ, ಪಾತಾಲಿಕೆ
ನೇತ್ರಾವತಿಯ ಪ್ರಮುಖ ಮೂಲ ಮೃತ್ಯುಂಜಯ ನದಿಯಲ್ಲಿ ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಅಣಿಯೂರು ಹಳ್ಳ, ಸುನಾಳ ಹೊಳೆ, ನೆರಿಯ ಹೊಳೆ, ಎಳನೀರು ಹೊಳೆಗಳು ಚಾರ್ಮಾಡಿ ಘಾಟಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದು, ಇವುಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ನಂದಿಬೆಟ್ಟ, ಪಾತಾಲಿಕೆ ಅರಣ್ಯ ವ್ಯಾಪ್ತಿಯಲ್ಲಿ ಹೊಸ ತೊರೆಯೇ ಸೃಷ್ಟಿಯಾಗಿದ್ದು, ಈ ವ್ಯಾಪ್ತಿಯ 50 ಎಕರೆ ತೋಟ ವ್ಯಾಪ್ತಿಯಲ್ಲಿ ನದಿಯಂತೆ ನೀರು ಹರಿಯುತ್ತಿತ್ತು. ಆದರೆ ಈಗ ಈ ಪ್ರದೇಶ ಬರಡು ನದಿಯಂತಾಗಿದೆ.

ಗಂಡಿಬಾಗಿಲಲ್ಲೂ ನೀರಿಲ್ಲ
ದೇವರ ಕಣಿವೆ ಹಾಗೂ ಕುಂಬಕಲ್ಲುಬೆಟ್ಟ ಮೂಲಕ ಉಗಮವಾಗುವ ನೆರಿಯಹೊಳೆ ಗಂಡಿಬಾಗಿಲು ಸಮೀಪ ನೇತ್ರಾವತಿ ನದಿ ಸೇರುತ್ತದೆ. ಇಲ್ಲಿಯೂ ನೀರು ಹಿಂದಿನ ಮಟ್ಟದಲ್ಲಿಲ್ಲ. ದೇವರ ಕಣಿವೆ ಹಾಗೂ ಕುಂಬಕಲ್ಲು ಬೆಟ್ಟ, ಸಿದ್ದಕಾಡು ಪ್ರದೇಶದಲ್ಲಿ ನೀರು ಪಥ ಬದಲಾಗಿದೆ.

ಕಲ್ಬೆಟ್ಟು ಪ್ರದೇಶದಲ್ಲಿ ಉತ್ತಮ ನೀರು
ಎಳನೀರು ಹೊಳೆಯು ಹಿರಿಮರಿಗುಡ್ಡ, ಕೃಷ್ಣಗಿರಿ, ಕುದುರೆಮುಖ, ಕಲ್ಬೆಟ್ಟು ಮೂಲಕ ನೇತ್ರಾವತಿ ನದಿ ಸೇರುತ್ತದೆ. ಈ ನದಿ ಬೊಳ್ಳುಗುಡ್ಡ, ತೇರುಗುಡ್ಡ ಪ್ರದೇಶದಲ್ಲಿ ಹರಿಯುವ ಬದಲಾಗಿ ಕಲ್ಬೆಡ್ಡು ಪೂರ್ವದಲ್ಲೇ ಹೊಸ ಮಾರ್ಗವಾಗಿ ಹರಿಯುತ್ತಿದ್ದು, ಈ ಭಾಗ ದಲ್ಲಿ ಮಾತ್ರ ನೀರಿನ ಪ್ರಮಾಣ ಯಥಾಸ್ಥಿತಿಯಲ್ಲಿದೆ. ನದಿ ನೀರಿನ ಪ್ರಮಾಣ ಕುಸಿದಿರುವುದರಿಂದ ಬಹುತೇಕ ನೆರೆಪೀಡಿತ ಪ್ರದೇಶಗಳ ನದಿಯಲ್ಲಿ ಬೃಹತ್ ಮರ, ಬಂಡೆಗಳ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಅಂತರ್ಗಾಮಿಯಾಗಿ ಹರಿಯುವುದೇ ನದಿ?
ಭೂ ಕುಸಿತ, ಪ್ರವಾಹದ ಪರಿಣಾಮ ಪಶ್ಚಿಮಘಟ್ಟ ಪ್ರದೇಶದ ಭೂ ಸಂರಚನೆಯಲ್ಲಿ ಬದಲಾವಣೆ ಆಗಿರುವುದರಿಂದ ನೈಸರ್ಗಿಕ ನೀರಿನ ಮೂಲಗಳಿಗೂ ತೊಂದರೆಯಾಗಿದೆ. ಬಹುತೇಕ ನೀರು ಭೂ ಅಂತರಾಳದಲ್ಲಿ ಅಂತರ್ಗಾಮಿಯಾಗಿ ಹರಿಯುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣದಿಂದ ನದಿಮೂಲ, ಉಪನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಂಗಳೂರು ವಿವಿ ಸಾಗರ ಭೂವಿಜ್ಞಾನ ವಿಭಾಗ ಪ್ರಾಧ್ಯಾಪಕ ಹಾಗೂ ಭೂವಿಜ್ಞಾನಿ ಪ್ರೊ.ಗಂಗಾಧರ್ ಭಟ್.
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮುಂದೆ ನಡೆಯಬಹುದಾದ ಘಟನೆ ಸಂಪೂರ್ಣ ಮಾಹಿತಿ ಗಾಡ್ಗೀಳ್ ವರದಿಯಲ್ಲಿದೆ. ಈ ವರದಿ ಆಧಾರದಲ್ಲಿ ಸರ್ಕಾರಗಳು ಮುಂಜಾಗ್ರತೆ ಕ್ರಮ ಕೈಗೊಳ್ಳದೆ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಇಂತಹ ದುರ್ಘಟನೆ ನಡೆಯುತ್ತಿರುತ್ತವೆ. ಮುಂದೆ ಇದು ನಿರಂತರವಾಗಿ ನಡೆದರೂ ಅನುಮಾನವಿಲ್ಲ. ಇದರ ಮುನ್ಸೂಚನೆಯೇ ನದಿಮೂಲ, ನದಿಗಳಲ್ಲಿ ನೀರಿನ ಕೊರತೆ ಎಂದು ಅವರು ವಿವಿರಿಸಿದರು.

ನದಿಗಳ, ಬೆಟ್ಟಗುಡ್ಡಗಳ ನೈಸರ್ಗಿಕ ರಚನೆಯಲ್ಲಿ ಏರುಪೇರಾಗಿರುವುದರಿಂದ ನೀರಿನ ಹರಿಯುವಿಕೆಗೆ ತೊಡಕಾಗಿದೆ. ಪಶ್ಚಿಮಘಟ್ಟ ಪ್ರದೇಶದಿಂದ ಕರಾವಳಿಯ ಸಾಗರದವರೆಗೆ ಇಳಿಜಾರಿನ ಭೂ ಪ್ರದೇಶ ಹೊಂದಿರುವುದರಿಂದ ನದಿನೀರು ಭೂ ಮೇಲ್ಮೈಯಲ್ಲಿ ಹರಿಯುವ ಬದಲು ಅಂತರ್ಗಾಮಿಯಾಗಿ ಹರಿಯುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಸಮಿತಿ ರಚಿಸಿ ಅಧ್ಯಯನ ಮಾಡಬೇಕು.
– ಪ್ರೊ.ಗಂಗಾಧರ್ ಭಟ್, ಭೂ ವಿಜ್ಞಾನಿ

Leave a Reply

Your email address will not be published. Required fields are marked *