ನನ್ನನ್ನು ಮಹೇಂದ್ರ ಸಿಂಗ್​ ಧೋನಿಯೊಂದಿಗೆ ಹೋಲಿಸಬೇಡಿ: ರಿಷಭ್​ ಪಂತ್​

ನವದೆಹಲಿ: ನನ್ನನ್ನು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರೊಂದಿಗೆ ಹೋಲಿಸಬೇಡಿ ಎಂದು ಭಾರತ ತಂಡದ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಮನವಿ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪಂತ್​ ‘ಧೋನಿ ಲೆಜೆಂಡ್​ ಆಟಗಾರ ಅವರೊಂದಿಗೆ ನನ್ನನ್ನು ಹೋಲಿಸುವುದು ಸರಿಯಲ್ಲ. ಆದರೆ ನನ್ನಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಧೋನಿ ಅವರೊಂದಿಗೆ ನನ್ನನ್ನು ಹೋಲಿಸುವುದರ ಕುರಿತು ಹೆಚ್ಚಾಗಿ ಚಿಂತಿಸುತ್ತಿಲ್ಲ. ಓರ್ವ ಆಟಗಾರನಾಗಿ ನಾನು ಧೋನಿಯಿಂದ ಸಾಕಷ್ಟು ಕಲಿಯಬೇಕಿದೆ. ನನ್ನ ಆಟವನ್ನು ಉತ್ತಮಪಡಿಸಿಕೊಳ್ಳಲು ಧೋನಿ ಅವರಿಂದ ಸಲಹೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಕೊಹ್ಲಿ ಮತ್ತು ಧೋನಿ ಅವರಿಂದ ಶಿಸ್ತು, ಒತ್ತಡವನ್ನು ತಡೆದುಕೊಳ್ಳುವುದು ಹೇಗೆ, ಬೇರೆಯವರ ತಪ್ಪುಗಳಿಂದ ಪಾಠ ಕಲಿಯುವುದು ಹೇಗೆ ಮತ್ತು ಕಲಿತ ಪಾಠಗಳನ್ನು ನಮ್ಮ ಆಟದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತಿದ್ದೇನೆ. ಅವರಿಂದ ಕಲಿಯುವುದು ಇನ್ನೂ ಸಾಕಷ್ಟಿದೆ ಎಂದು ಪಂತ್​ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಧೋನಿ ಬದಲು ಪಂತ್​ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಪಂತ್​ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಪಂತ್​ ಅವರ ವಿರುದ್ಧ ಹಲವರು ಕಿಡಿ ಕಾರಿದ್ದರು. (ಏಜೆನ್ಸೀಸ್​)