ಪಂತ್​ ಆಟಕ್ಕೆ ಮನಸೋತ ಪಾಂಟಿಂಗ್​ ಹೇಳಿದ್ದು ಭಾರತೀಯರಿಗೆ ಹೆಮ್ಮೆ!

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟ್​ ದಿಗ್ಗಜ ಹಾಗೂ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಟೀಂ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್​ ಅವರ ಅಮೋಘ ಆಟಕ್ಕೆ ಮನ ಸೋತಿದ್ದು, ರಿಷಭ್​​ರನ್ನು ಹಾಡಿ ಹೊಗಳಿದ್ದಾರೆ.

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಅಂಗಳದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ​ ಅಜೇಯ 159 ರನ್ ಸಿಡಿಸಿದ ರಿಷಭ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ರಿಷಭ್​ ಎಲ್ಲರ ಹೃದಯವನ್ನು ಗೆದ್ದಿದ್ದಾರೆ.

ಎದುರಾಳಿ ಆಟಗಾರರ ಮೆಚ್ಚುಗೆಗೆ ಪಾತ್ರರಾಗಿರುವ ರಿಷಭ್​ ಅವರನ್ನು ಆಸಿಸ್​ ಪಡೆಗೆ ಮೂರು ಬಾರಿ ವಿಶ್ವಕಪ್​ ಗೆಲ್ಲಿಸಿ ಕೊಟ್ಟ ದಿಗಜ ರಿಕಿ ಪಾಂಟಿಂಗ್​, ಆಡಮ್​ ಗಿಲ್​ಕ್ರಿಸ್ಟ್​ಗೆ ಹೋಲಿಸಿದ್ದಾರೆ. ಅಷ್ಟೇ ಅಲ್ಲದೆ ಪಾಂಟಿಂಗ್ ಪ್ರಕಾರ ರಿಷಬ್ ಧೋನಿಯನ್ನು ಹಿಂದಿಕ್ಕಲಿದ್ದಾರೆ ಎಂದು ಹೊಗಳಿದ್ದಾರೆ.

ರಿಷಭ್​ ವಿಕೆಟ್ ಕೀಪಿಂಗ್​ನಲ್ಲಿ ಸ್ವಲ್ಪ ಸುಧಾರಿಸಿಕೊಳ್ಳಬೇಕು. ಯಾವಾಗಲೂ ಎಲ್ಲರೂ ಧೋನಿ ಹಾಗೂ ಟೀಂ ಇಂಡಿಯಾದಲ್ಲಿ ಅವರ ಪ್ರಭಾವದ ಬಗ್ಗೆ ಮಾತಾಡುತ್ತಾರೆ. ಧೋನಿ ಟೀಂ ಇಂಡಿಯಾ ಪರವಾಗಿ ತುಂಬಾ ಟೆಸ್ಟ್ ಪಂದ್ಯಗಳನ್ನ ಆಡಿದ್ದಾರೆ. ಆದರೆ, ಇಲ್ಲಿಯವರೆಗೆ ಆಸಿಸ್​ ನೆಲದಲ್ಲಿ ಟೆಸ್ಟ್​ನಲ್ಲಿ ಸೆಂಚುರಿ ಸಿಡಿಸಿಲ್ಲ. ಆದರೆ, ಈ ಯುವ ಕಿಲಾಡಿ ಧೋನಿಯಿಂದ ಆಗದ್ದನ್ನು ಮಾಡಿ ತೋರಿಸಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗಿಲ್ ಕ್ರಿಸ್ಟ್ ಕೂಡ ಆಕ್ರಮಣಾರಿಯಾಗಿ ಎದುರಾಳಿ ದಾಳಿಗೆ ಉತ್ತರ ಕೊಡುತ್ತಿದ್ದರು.ರಿಷಬ್ ಕೂಡ ಗಿಲ್ ಕ್ರಿಸ್ಟ್ ಹಾಗೆ ಎಡಗೈ ಬ್ಯಾಟ್ಸ್ ಮನ್ ಆಗಿದ್ದು, ಅವರ ಶೈಲಿಯನ್ನು ನೋಡಿದರೆ ಮುಂದೊಂದು ದಿನ ಟೀಂ ಇಂಡಿಯಾ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ಹಲವು ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಳ್ಳುವುದರಲ್ಲಿ ಅನುಮಾನನೇ ಇಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)