ಇಂಗ್ಲೆಂಡ್​ ಟೆಸ್ಟ್​ ಸರಣಿಗೆ ಟೀಂ ಪ್ರಕಟ: ಕರುಣ್​ ಕಮ್​ಬ್ಯಾಕ್​, ಪಂತ್​ಗೆ ಸ್ಥಾನ

ಲೀಡ್ಸ್​: ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಕರುಣ್​ ನಾಯಕ್​ ಟೀಂಗೆ ಕಮ್​ಬ್ಯಾಕ್​ ಮಾಡಿದ್ದರೆ, ದೆಹಲಿಯ ಯುವ ಆಟಗಾರ ರಿಷಭ್​ ಪಂತ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಫಿಟ್​ನೆಸ್​ ಸಮಸ್ಯೆಯಿಂದಾಗಿ ಆಘ್ಘಾನಿಸ್ತಾನ ವಿರುದ್ಧದ ಮತ್ತು ಇಂಗ್ಲೆಂಡ್​ ವಿರುದ್ಧದ ಏಕದಿನ ಮತ್ತು ಟಿ20 ಟೀಂನಿಂದ ಹೊರಗುಳಿದಿದ್ದ ಮೊಹಮ್ಮದ್​ ಶಮಿ ತಂಡಕ್ಕೆ ಮರಳಿದ್ದಾರೆ. ಉಳಿದಂತೆ ಎಡಗೈ ಸ್ಪಿನ್ನರ್​ ಕುಲದೀಪ್​ ಯಾದವ್​ಗೆ ಟೆಸ್ಟ್​ನಲ್ಲಿ ಸ್ಥಾನ ಲಭಿಸಿದೆ.

ಇಂಗ್ಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿರುವ ವೇಗಿ ಭುವನೇಶ್ವರ್​ ಕುಮಾರ್​ ಅವರು ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರ ಗಾಯದ ಕುರಿತು ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ.

ಉಳಿದಂತೆ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಿಂದ ದೂರ ಉಳಿದಿದ್ದ ಜಸ್ಪ್ರೀತ್​ ಬೂಮ್ರಾ 2ನೇ ಟೆಸ್ಟ್​ ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಮೊದಲ ಟೆಸ್ಟ್​ ಪಂದ್ಯ ಬರ್ಮಿಂಗ್​ಹ್ಯಾಮ್​ನಲ್ಲಿ ಆಗಸ್ಟ್​ 1 ರಿಂದ ಪ್ರಾರಂಭವಾಗಲಿದೆ.

ಭಾರತ ತಂಡ:

ವಿರಾಟ್​ ಕೊಹ್ಲಿ (ನಾ), ಶಿಖರ್​ ಧವನ್​, ಕೆ.ಎಲ್​. ರಾಹುಲ್​, ಮುರಳಿ ವಿಜಯ್​, ಚೇತೇಶ್ವರ್​ ಪೂಜಾರ, ಅಜಿಂಕ್ಯ ರಹಾನೆ (ಉ.ನಾ), ಕರುಣ್​ ನಾಯರ್​, ದಿನೇಶ್​ ಕಾರ್ತಿಕ್​ (ವಿ.ಕೀ.), ರಿಷಭ್​ ಪಂತ್​ (ವಿ.ಕೀ.), ಆರ್​. ಆಶ್ವಿನ್​, ರವೀಂದ್ರ ಜಡೇಜಾ, ಕುಲದೀಪ್​ ಯಾದವ್​, ಹಾರ್ದಿಕ್​ ಪಾಂಡ್ಯ, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಉಮೇಶ್​ ಯಾದವ್​, ಜಸ್ಪ್ರೀತ್​ ಬೂಮ್ರಾ, ಶಾರ್ದುಲ್​ ಠಾಕೂರ್​.