VIDEO| ಹೋಟೆಲ್​ ಕಾರಿಡಾರ್​ನಲ್ಲೇ ಪ್ರಾಕ್ಟೀಸ್​ ಮಾಡಿದ ರಿಷಭ್​ ಪಂತ್​, ಕುಲದೀಪ್​ ಯಾದವ್​

ಪೋರ್ಟ್​ ಆಫ್​ಸ್ಪೇನ್ (ಟ್ರಿನಿಡಾಡ್): ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾದ ಯುವ ಆಟಗಾರರ ರಿಷಭ್​ ಪಂತ್​ ಮತ್ತು ಕುಲದೀಪ್​ ಯಾದವ್​ ವಿಂಡೀಸ್​ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಅವರು ಮೈದಾನದಲ್ಲಿ ಬೆವರು ಸುರಿಸಿ ಅಭ್ಯಾಸ ನಡೆಸುವ ಜತೆಗೆ ತಾವು ಉಳಿದುಕೊಂಡಿರುವ ಹೋಟೆಲ್​ನ ಕಾರಿಡಾರ್​ನಲ್ಲೂ ಅಭ್ಯಾಸ ನಡೆಸಿ ಸುದ್ದಿಯಾಗಿದ್ದಾರೆ.

ಟೀಮ್​ ಇಂಡಿಯಾದ ಯುವ ಆಟಗಾರರಾದ ರಿಷಭ್​ ಪಂತ್​ ಮತ್ತು ಕುಲದೀಪ್​ ಯಾದವ್​ ಹೋಟೆಲ್​ನ ಕಾರಿಡಾರ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಕುಲದೀಪ್​ ಬೌಲಿಂಗ್​ ಮಾಡಿದರೆ, ಪಂತ್​ ವಿಕೆಟ್​ ಕೀಪಿಂಗ್​ ಅಭ್ಯಾಸ ಮಾಡಿದ್ದಾರೆ. ಇದರ ವಿಡಿಯೋವನ್ನು ಪಂತ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗಿದ್ದು, ಇಬ್ಬರೂ ಯುವ ಆಟಗಾರರ ಬದ್ಧತೆಯನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ.

ಟೀಮ್​ ಇಂಡಿಯಾದ ಮಾಜಿ ನಾಯಕ, ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ವೆಸ್ಟ್​ ಇಂಡೀಸ್​ ಪ್ರವಾಸದಿಂದ ಹಿಂದೆ ಸರಿದು 2 ತಿಂಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ರಿಷಭ್​ ಪಂತ್​ಗೆ ಟಿ20, ಏಕದಿನ ಮತ್ತು ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಭಾರತ ತಂಡ ಈಗಾಗಲೇ 3 ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಏಕದಿನ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ಎರಡನೇ ಪಂದ್ಯದಲ್ಲಿ ಭಾರತ ತಂಡ 59 ರನ್​ಗಳಿಂದ ಜಯ ಗಳಿಸಿದ್ದು, ಸರಣಿಯಲ್ಲಿ 1-0 ಇಂದು ಮುನ್ನಡೆ ಪಡೆದಿದೆ. (ಏಜೆನ್ಸೀಸ್​)