ರಾಯುಡು, ಪಂತ್, ಸೈನಿಗೆ ಸ್ಥಾನ

ನವದೆಹಲಿ: ಏಕದಿನ ವಿಶ್ವಕಪ್​ನಲ್ಲಿ ಆಡಲಿರುವ 15 ಆಟಗಾರರ ಭಾರತ ತಂಡಕ್ಕೆ ಮೂವರು ಮೀಸಲು ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಯುವ ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್, ಅನುಭವಿ ಬ್ಯಾಟ್ಸ್​ಮನ್ ಅಂಬಟಿ ರಾಯುಡು ಹಾಗೂ ವೇಗಿ ನವ್​ದೀಪ್ ಸೈನಿ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೇನಾದರೂ ಪ್ರಧಾನ ತಂಡದಲ್ಲಿನ ಆಟಗಾರರು ಗಾಯಗೊಂಡಲ್ಲಿ ಅವರ ಬದಲಿಯಾಗಿ ಇವರು ಇಂಗ್ಲೆಂಡ್​ಗೆ ತೆರಳಲಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿದ್ದಂತೆ, ನಾವು ಮೂವರು ಬದಲಿ ಆಟಗಾರರನ್ನು ಪ್ರಕಟಿಸಿದ್ದೇವೆ. ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ರಿಷಭ್ ಪಂತ್ ಮೊದಲ ಆಯ್ಕೆಯ ಹಾಗೂ ಅಂಬಟಿ ರಾಯುಡು 2ನೇ ಆಯ್ಕೆಯ ಆಟಗಾರರಾಗಿದ್ದರೆ, ಬೌಲಿಂಗ್ ವಿಭಾಗದಲ್ಲಿ ನವ್​ದೀಪ್ ಸೈನಿ ಬದಲಿ ಬೌಲರ್ ಆಗಿದ್ದಾರೆ. ತಂಡಕ್ಕೆ ಅಗತ್ಯವಿದ್ದಲ್ಲಿ ಇವರು ಪ್ರಯಾಣ ಮಾಡಲಿದ್ದಾರೆ’ ಎಂದು ಬಿಸಿಸಿಐ ತಿಳಿಸಿದೆ.

ಇದೇ ವೇಳೆ ವಿಶ್ವಕಪ್ ತಂಡದ ಬಗ್ಗೆ ಮಾತನಾಡಿರುವ ಕೋಚ್ ರವಿಶಾಸ್ತ್ರಿ, ಸ್ಥಾನ ಪಡೆಯಲು ವಿಫಲರಾದವರು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಕೆಲವೊಮ್ಮೆ ಅವಕಾಶ ಯಾವಾಗ ಬೇಕಾದರೂ ಬರಬಹುದು ಎನ್ನುವ ಮೂಲಕ ಪಂತ್ ಹಾಗೂ ರಾಯುಡುಗೆ ವಿಶ್ವಾಸ ತುಂಬಿದ್ದಾರೆ.

‘ತಂಡ ಆಯ್ಕೆಯ ಪ್ರಕ್ರಿಯೆಯಲ್ಲಿ ನಾನಿರಲಿಲ್ಲ. ನಮ್ಮ ಅಭಿಪ್ರಾಯಗಳನ್ನು ನಾಯಕನಿಗೆ ತಿಳಿಸಿದ್ದೇವೆ. 15 ಆಟಗಾರರನ್ನು ಆಯ್ಕೆ ಮಾಡಬೇಕಾದಾಗ ಯಾರಾದರೂ ಒಬ್ಬರು ಸ್ಥಾನ ತಪ್ಪಿಸಿಕೊಳ್ಳುತ್ತಾರೆ. ಇದು ದುರದೃಷ್ಟ. 16 ಆಟಗಾರರ ತಂಡವನ್ನು ನಾನು ಮೆಚ್ಚುತ್ತಿದ್ದೆ. ದೀರ್ಘ ಟೂರ್ನಿ ಆಗಿರುವ ಕಾರಣ 16 ಆಟಗಾರರಿಗೆ ಅವಕಾಶ ನೀಡಬೇಕು ಎಂದು ಐಸಿಸಿಗೂ ಹೇಳಿದ್ದೆವು. ಆದರೆ, 15 ಆಟಗಾರರಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಖಾಸಗಿ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ಫೇವರಿಟ್: ‘ಸ್ಥಾನ ತಪ್ಪಿಸಿಕೊಂಡವರು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಗಾಯಗಳಾದಾಗ ತಂಡ ಸೇರಿಕೊಳ್ಳುವ ಅವಕಾಶವೂ ಇರುತ್ತದೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ವಿಶ್ವಕಪ್ ದೃಷ್ಟಿಯಲ್ಲಿ ನೋಡುವು ದಾದರೆ, ಬಲಿಷ್ಠ ಆಟಗಾರರನ್ನು ಹೊಂದಿರುವ ಆತಿಥೇಯ ಇಂಗ್ಲೆಂಡ್ ಫೇವರಿಟ್ ಎಂದರು. -ಪಿಟಿಐ

ರಾಯುಡು ವಿರುದ್ಧ ಬಿಸಿಸಿಐ ಕ್ರಮವಿಲ್ಲ

ನವದೆಹಲಿ: ವಿಶ್ವಕಪ್ ತಂಡದಿಂದ ತಮ್ಮನ್ನು ಕೈಬಿಟ್ಟ ಕಾರಣಕ್ಕಾಗಿ, ಕೊಂಕು ಟ್ವೀಟ್​ನ ಮೂಲಕ ಆಯ್ಕೆ ಸಮಿತಿಯ ನಿರ್ಧಾರವನ್ನು ಟೀಕಿಸಿದ್ದ ಅಂಬಟಿ ರಾಯುಡು ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್, ಆಲ್ರೌಂಡರ್ ವಿಜಯ್ ಶಂಕರ್​ರ ಆಯ್ಕೆಗೆ ನೀಡಿದ ಕಾರಣವನ್ನು ತಿಳಿಸುತ್ತಾ ಹೇಳಿದ 3 ಡೈಮೆನ್ಷನ್ ಪದವನ್ನು ಟೀಕಿಸಿದ್ದ ರಾಯುಡು, ‘ವಿಶ್ವಕಪ್ ನೋಡಲು 3ಡಿ ಗ್ಲಾಸ್ ಆರ್ಡರ್ ಮಾಡಿದ್ದೇನೆ’ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು.

ಬಿಸಿಸಿಐ ಕೂಡ ಅಂಬಟಿ ರಾಯುಡು ಮಾಡಿದ ಟ್ವೀಟ್​ಅನ್ನು ಗಮನಿಸಿದ್ದು, ಇದು ಆಯ್ಕೆ ಸಮಿತಿಯ ನಿರ್ಧಾರಕ್ಕೆ ನೇರವಾಗಿ ಮಾಡಿದ ಕಮೆಂಟ್ ಅಲ್ಲ ಎಂದು ಪರಿಗಣಿಸಿದೆ. ಆ ಕಾರಣಕ್ಕಾಗಿ ರಾಯುಡು ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದೆ.

‘ರಾಯುಡು ಮಾಡಿದ ಟ್ವೀಟ್ ಗಮನಿಸಿದ್ದೇವೆ. ಪ್ರಸ್ತುತ ಅವರ ಮನಸ್ಸಲ್ಲಿ ಇರುವ ಭಾವನೆಗಳು ನಮಗೆ ಅರ್ಥವಾಗುತ್ತದೆ. ಬೇಸರವನ್ನು ಹೊರಗೆ ತೋರಿಸಿಕೊಳ್ಳಲು ವಿವಿಧ ರೀತಿಯ ಮಾರ್ಗಗಳು ಇರುತ್ತವೆ. ಬಿಸಿಸಿಐನ ನಿಯಮ ಮೀರಿ ಅವರ ಭಾವನೆಗಳು ವ್ಯಕ್ತವಾದಾಗ ಮಾತ್ರವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೇಸರವನ್ನು ಕಳೆದುಕೊಳ್ಳಲು ಅವರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಇದು ನಮಗೂ ಅರ್ಥವಾಗುತ್ತದೆ. ಇಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳುವ ಅಗತ್ಯವಿಲ್ಲ. ಅದಲ್ಲದೆ, ವಿಶ್ವಕಪ್​ಗೆ ಆತ ಮೀಸಲು ತಂಡದಲ್ಲಿರುವ ಆಟಗಾರನಾಗಿದ್ದಾರೆ. ಹಾಗೇನಾದರೂ ವಿಶ್ವಕಪ್ ತಂಡದ ಆಟಗಾರರಲ್ಲಿ ಯಾರಿಗಾದರೂ ಗಾಯವಾದಲ್ಲಿ ರಾಯುಡುಗೆ ಆಡುವ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.

ವಿಶ್ವಕಪ್ ತಂಡದ ಆಟಗಾರರಿಗೆ ಯೋಯೋ ಫಿಟ್ನೆಸ್ ಟೆಸ್ಟ್ ಇರಲ್ಲ 

ವಿಶ್ವಕಪ್​ನಲ್ಲಿ ಆಡಲಿರುವ ಆಟಗಾರರಿಗೆ ಯೋ ಯೋ ಟೆಸ್ಟ್ ಇರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಮೇ 12 ರಂದು ಐಪಿಎಲ್ ಮುಗಿಯಲಿದ್ದು, ಆ ಬಳಿಕ ಕೆಲ ದಿನಗಳಲ್ಲಿಯೇ ತಂಡ ಇಂಗ್ಲೆಂಡ್​ಗೆ ಪ್ರಯಾಣಿಸಲಿದೆ. ನಿಬಿಡ ವೇಳಾಪಟ್ಟಿ ಇರುವ ಕಾರಣ, ಯೋ ಯೋ ಟೆಸ್ಟ್ ನಡೆಸುತ್ತಿಲ್ಲ ಎಂದು ಹೇಳಿದೆ.

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಯಲ್ಲಿ ಆಡಿದ ಮೂರು ಕಳಪೆ ಇನಿಂಗ್ಸ್​ಗಳು ವಿಶ್ವಕಪ್ ತಂಡದಿಂದ ಅವರು ಹೊರಬೀಳಲು ಕಾರಣವಾಗಿದೆ. ಮಂಗಳವಾರ ಸಂಜೆಯ ವೇಳೆಗೆ ರಾಯುಡು ಮಾಡಿದ ಈ ಟ್ವೀಟ್​ಗೆ 5,600ಕ್ಕೂ ಅಧಿಕ ಕಾಮೆಂಟ್, 13 ಸಾವಿರ ರೀಟ್ವೀಟ್ ಹಾಗೂ 80 ಸಾವಿರ ಲೈಕ್​ಗಳು ವ್ಯಕ್ತವಾಗಿವೆ. -ಪಿಟಿಐ