
ಬೆಂಗಳೂರು: ‘ಗರುಡ ಗಮನ ವೃಷಭ ವಾಹನ’ ಶೀರ್ಷಿಕೆ ಮೂಲಕ ಸದ್ದು ಮಾಡುತ್ತಿರುವ ರಾಜ್- ರಿಷಬ್ ಕಾಂಬಿನೇಷನ್ ಸಿನಿಮಾ, ಇತ್ತೀಚೆಗಷ್ಟೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ‘ಗಮನ’ ಸೆಳೆದಿತ್ತು. ಈಗ ಇದೇ ‘ವಾಹನ’ ಮತ್ತೊಂದಿಷ್ಟು ಅಪ್ಡೇಟ್ಸ್ ಜತೆಗೆ ಆಗಮಿಸಿದೆ. ಅಂದರೆ, ಚಿತ್ರದಲ್ಲಿ ಅಂಡರ್ವರ್ಲ್ಡ್ನಷ್ಟೇ ಪ್ರಧಾನವಾದ ಇನ್ನೂ ಒಂದು ಅಂಶ ಇದೆ ಎಂಬುದನ್ನು ಹೇಳುವ ಪ್ರಯತ್ನ ನಿರ್ದೇಶಕರಿಂದಾಗಿದೆ. ಅದೇನು ಎಂಬುದನ್ನು ಮಂಗಳವಾರ ಬಿಡುಗಡೆ ಮಾಡಲಾದ ಹೊಸ ಪೋಸ್ಟರ್ನಲ್ಲಿ ತಿಳಿಸಿದ್ದಾರೆ. ಅದೇ ಹುಲಿವೇಷ!
ಕರಾವಳಿ ಎಂದರೆ ಅಲ್ಲಿ ಮೀನು, ಕಡಲು ಹೇಗೆ ಸಾಮಾನ್ಯವೋ, ಹುಲಿಕುಣಿತವೂ ಅಷ್ಟೇ ಸಾಮಾನ್ಯ. ಹಾಗಾಗಿ ಆ ಕುಣಿತವನ್ನು ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿಯೂ ಅಳವಡಿಸಿದ್ದಾರೆ ನಿರ್ದೇಶಕ ರಾಜ್.ಬಿ ಶೆಟ್ಟಿ. ‘ಇದೊಂದು ಗ್ಯಾಂಗ್ಸ್ಟರ್ ಸಿನಿಮಾ ಆಗಿರುವುದರಿಂದ ಹೊಡಿ-ಬಡಿ ಕಥೆಗೆ ಹುಲಿವೇಷದ ನಂಟನ್ನೂ ಬೆರೆಸಿದ್ದೇವೆ. ಆ ಕುಣಿತದ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಿ ಸವಿಯಬೇಕು’ ಎಂದಷ್ಟೇ ಮಾಹಿತಿ ನೀಡುತ್ತಾರೆ ರಾಜ್.
ಇಬ್ಬರು ರೌಡಿಗಳ ಕಥೆ ಹೊಂದಿರುವ ಈ ಸಿನಿಮಾ ಪೂರ್ತಿ ಚಿತ್ರೀಕರಣ ದಕ್ಷಿಣ ಕನ್ನಡ ಭಾಗದಲ್ಲಿ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಭೂಗತ ಜಗತ್ತಿನ ಸುತ್ತ ಹೆಣೆದ ಕಾಲ್ಪನಿಕ ಕಥೆಯಲ್ಲಿ ರಿಷಬ್ ಶೆಟ್ಟಿ ಮತ್ತು ರಾಜ್ ಶೆಟ್ಟಿ ರೌಡಿಗಳಾಗಿ ಕಾಣಿಸಿಕೊಂಡಿದ್ದು, ಈ ಇಬ್ಬರಿಗೂ ಯಾವುದೇ ನಾಯಕಿಯರಿಲ್ಲ. ಎಲ್ಲ ಅಂದುಕೊಂಡಂತೆ ಆದರೆ, ಜೂನ್ ತಿಂಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ರಾಜ್ ಶೆಟ್ಟಿ. ಸ್ನೇಹಿತರೊಂದಿಗೆ ಸೇರಿ ‘ಲೈಟರ್ ಬುದ್ಧ ಫಿಲಮ್್ಸ’ ಎಂಬ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿರುವ ರಾಜ್ ಶೆಟ್ಟಿ, ಈ ಬ್ಯಾನರ್ನಿಂದ ಈ ಚಿತ್ರವನ್ನು ನಿರ್ವಿುಸಿದ್ದಾರೆ.
ನಮ್ಮ ಸಿನೆಮಾ ಗರುಡ ಗಮನ ವೃಷಭ ವಾಹನದ ಎರಡನೇ ಪೋಸ್ಟರ್ ನಿಮ್ಮ ಮುಂದೆ
ಹುಲಿವೇಷ ಕರಾವಳಿಯ ಹೃದಯ ಬಡಿತ, ನಮ್ಮ ಸಿನೆಮಾದಲ್ಲೂ ಇದು ಬಹುಮುಖ್ಯ ಅಂಗ #rajbshetty @GGVVTheMovie#GGVV #GGVVJUNE2020 #GGVVSecondPoster #GGVVTheMovie pic.twitter.com/n9oTVxrF8D— Rishab Shetty (@shetty_rishab) March 10, 2020