ಹೂಕೋಸು ಎಲೆಕೋಸು ಬೆಳೆ ಸಲೀಸು

ಪ್ರಕಾಶ್ ಮಂಜೇಶ್ವರ ಮಂಗಳೂರು
ಶೀತ ವಲಯದ ಪ್ರಮುಖ ಬೆಳೆ ಕ್ಯಾಬೇಜ್(ಎಲೆಕೋಸು) ಹಾಗೂ ಹೂಕೋಸು (ಕಾಲಿಫ್ಲವರ್) ಕರಾವಳಿಯಲ್ಲಿ ಬೆಳೆಸುವ ಪ್ರಯೋಗ ಸದ್ಯ ಯಶಸ್ವಿಯಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧೆಡೆ ಈ ಬಾರಿ ಮಾರುಕಟ್ಟೆಯಲ್ಲಿ ಸದ್ದು ಮಾಡುವಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿಲ್ಲವಾದರೂ, ರಾಸಾಯನಿಕ ಗೊಬ್ಬರ ಬಳಸದ ವಿಷರಹಿತ ಕ್ಯಾಬೇಜ್, ಕಾಲಿಫ್ಲವರ್ ಖಾದ್ಯ ಸವಿದ ಸಂತೃಪ್ತಿಗೆ ಈ ಭಾಗದ ಜನರು ಪಾತ್ರರಾಗಿದ್ದಾರೆ.
ಬೆಳ್ತಂಗಡಿ ಮುಂಡಾಜೆಯ ಕೃಷಿಕ ರಾಮಣ್ಣ ಮಂಗಳೂರಿನಲ್ಲಿ ನಡೆಯುವ ಭಾನುವಾರದ ಸಾವಯವ ಸಂತೆಯಲ್ಲಿ ತಮ್ಮ ತೋಟದಲ್ಲಿ ಬೆಳೆದ 40 ಕಾಲಿಫ್ಲವರ್ ಮಾರಾಟ ಮಾಡಿದ್ದಾರೆ. ಇವರ ತೋಟದ ಒಂದು ಹೂಕೋಸು ಅರ್ಧ ಕೆ.ಜಿ.ಯಿಂದ ಒಂದೂವರೆ ಕೆ.ಜಿ. ತನಕ ತೂಕವಿತ್ತು.

ರಾಮಣ್ಣ ಈ ಬಾರಿ ತಮ್ಮ ತೋಟದಲ್ಲಿ ಕಾಲಿಫ್ಲವರ್ ಮತ್ತು ಕ್ಯಾಬೇಜ್ ತಲಾ 100 ಗಿಡಗಳನ್ನು ನೆಟ್ಟಿದ್ದು, ಇದರಲ್ಲಿ ತಲಾ 65 ಗಿಡಗಳು ಆರೋಗ್ಯವಾಗಿವೆ.
ಉಡುಪಿ ತಾಲೂಕಿನ ಶಿರ್ವದ ರಾಮಚಂದ್ರ ಪೈ ಅವರು ಪಾಲಿ ಹೌಸ್‌ನಲ್ಲಿ ತಲಾ 200 ಗಿಡಗಳನ್ನು ನೆಟ್ಟಿದ್ದು, ಇದರಲ್ಲಿ ತಲಾ 60 ಗಿಡಗಳಷ್ಟು ಸುಸ್ಥಿತಿಯಲ್ಲಿವೆ. ಕಾಲಿಫ್ಲವರ್ ಅರಳಲು ಆರಂಭಗೊಂಡಿದ್ದು, ಎರಡು ವಾರದೊಳಗೆ ಕ್ಯಾಬೇಜ್ ಕೂಡ ಕೈಗೆ ಸಿಗಬಹುದು.

ರಾಮಚಂದ್ರ ಪೈಯವರು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರೂ, ಗಿಡಗಳ ಕಾಂಡ ಕತ್ತರಿಸುವ ಹುಳು ಅವರನ್ನು ಸುಮ್ಮನೆ ಇರಲು ಬಿಟ್ಟಿಲ್ಲ. ಗೋಮೂತ್ರ, ಜೀರಿಗೆ ಮೆಣಸು, ಬೆಳ್ಳುಳ್ಳಿ, ಹಳದಿ ಹುಡಿ ಮುಂತಾದ ವಸ್ತುಗಳನ್ನು ಒಳಗೊಂಡಿರುವ ಸಾವಯವ ದ್ರಾವಣ ಸಿಂಪಡನೆ ಮೂಲಕ ಕೀಟ ಬಾಧೆಗೆ ಸದ್ಯ ಅವರು ತಾತ್ಕಾಲಿಕ ಉಪಶಮನ ಕಂಡುಕೊಂಡಿದ್ದಾರೆ.

ಈ ಬಾರಿ ಕರಾವಳಿ ಹವಾಮಾನಕ್ಕೆ ಒಗ್ಗುವ ತಳಿಗಳನ್ನು ಪೂರೈಸಿದ ಕಾಸರಗೋಡು ಸೀಡ್ ಫಾರ್ಮ್‌ನ ಕಾಲಿಫ್ಲವರ್ ಹಾಗೂ ಕ್ಯಾಬೇಜ್ ಗಿಡಗಳು ಹೆಚ್ಚು ಆರೋಗ್ಯವಾಗಿ ಇಲ್ಲದೆ ಇದ್ದದ್ದು ಹಾಗೂ ಅದರ ಬೆಳವಣಿಗೆಯಲ್ಲಿ ಏಕರೂಪತೆ ಇಲ್ಲದೆ ಹೋಗಿರುವುದು ಆಸಕ್ತರ ಅಧ್ಯಯನಕ್ಕೆ ತೊಡಕಾಗಿದೆ.

ಬಹು ಬೆಳೆ ಸಾಧ್ಯತೆ: ಚಳಿಗಾಲದ ಕಾಲಿಫ್ಲವರ್ ಹಾಗೂ ಕ್ಯಾಬೇಜ್ ಬೆಳೆಯನ್ನು ಮಳೆಗಾಲದಲ್ಲಿ ಕೂಡ ಬೆಳೆಸುವ ಕುರಿತು ನಿರಂತರ ಪ್ರಯತ್ನ ನಡೆಯುತ್ತಿದೆ. ಕೇರಳದ ಚಳಿಗಾಲದ ತರಕಾರಿ ಬೆಳೆಗಳ ಪಿತಾಮಹ ಎಂದೇ ಕರೆಸಲ್ಪಡುವ ಡಾ.ನಾರಾಯಣ ಕುಟ್ಟಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಮುಂದಿನ ಮಳೆಗಾಲದ ಅವಧಿ ಹೆಚ್ಚಿನ ಪ್ರಯೋಗ ನಡೆಯುವುದು ನಿಶ್ಚಿತ. ಮಳೆಗಾಲದಲ್ಲಿ ಮಳೆ ನೀರು ಬೀಳದೆ, ಸೂರ್ಯ ರಶ್ಮಿಯನ್ನು ಮಾತ್ರ ಒಳಗೆ ಬಿಡುವ ಪಾಲಿ ಹೌಸ್‌ಗಳಲ್ಲಿ ಕಳೆದ ಐದಾರು ವರ್ಷಗಳಿಂದ ಗಿಡ ಬೆಳೆಸಿ ಯಶಸ್ವಿಯಾದವರನ್ನು ಡಾ.ಕುಟ್ಟಿ ಗುರುತಿಸಿದ್ದಾರೆ. ಬೆಳೆ ತೆಗೆದು ಯಶಸ್ವಿಯಾದ ರಾಮಣ್ಣ ಈ ಬಾರಿ ಬೇಸಗೆ ಕಾಲದಲ್ಲೂ ಸ್ವಲ್ಪ ಗಿಡ ನೆಟ್ಟು ನೋಡುವ ಹುಮ್ಮಸ್ಸಿನಲ್ಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಲಿಫ್ಲವರ್ ಹಾಗೂ ಕ್ಯಾಬೇಜ್ ಮುಂತಾದ ಚಳಿಗಾಲದ ಬೆಳೆಗಳ ಬಗ್ಗೆ ಕರಾವಳಿಯಲ್ಲಿ ಜಾಗೃತಿ ಹೆಚ್ಚುತ್ತಿದೆ. ಕೃಷಿಕರ ವಾಟ್ಸಾಪ್ ಗ್ರೂಪ್, ಸಾವಯವ ಗ್ರಾಹಕ ಬಳಗದ ಸಂಪರ್ಕ, ಪ್ರಸ್ತಾವಿತ ವಿಷಯಕ್ಕೆ ಸಂಬಂಧಿಸಿ ನಿರಂತರ ಸಂಪರ್ಕದಲ್ಲಿ ಇರುವವರ ಫೀಡ್‌ಬ್ಯಾಕ್ ಗಮನಿಸಿದರೆ ನಮ್ಮ ಕರಾವಳಿಯಲ್ಲಿ ಸದ್ಯ 100ಕ್ಕೂ ಅಧಿಕ ಕುಟುಂಬಗಳು ಈ ಬೆಳೆಯನ್ನು ತೆಗೆಯುತ್ತಿವೆ. ವಿಷಮುಕ್ತ ತರಕಾರಿ ಬಳಕೆಯಲ್ಲಿ ಇದೊಂದು ದಿಟ್ಟ ಹೆಜ್ಜೆ. ನಮ್ಮ ಹವಾಮಾನಕ್ಕೆ ಒಗ್ಗುವ ಗಿಡಗಳನ್ನು ಸ್ಥಳೀಯವಾಗಿಯೇ ಬೆಳೆಸುವ ಪ್ರಯತ್ನ ನಡೆಯಬೇಕು.
ಶ್ರೀಪಡ್ರೆ, ಹಿರಿಯ ಪ್ರಗತಿಪರ ಕೃಷಿಕ