ಬೆಳಗಾವಿ: ರಿಂಗ್ ರೋಡ್‌ಗೆ ಭೂಮಿ ನೀಡಲು ವಿರೋಧ

ಬೆಳಗಾವಿ:  ತಾಲೂಕಿನ ಮುತಗಾ ಗ್ರಾಪಂನ ಸದಸ್ಯರು, ಗ್ರಾಮಸ್ಥರು ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಕೃಷಿ ಭೂಮಿ ಸ್ವಾಧೀನ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸರ್ಕಾರವು ಸುಮಾರು 68.3 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ 427 ಹೆಕ್ಟೇರ್ ಜಮೀನು ಸ್ವಾಧೀನಪಡಿಸಲು ಜ.3ರಂದು ಅಧಿಸೂಚನೆ ಹೊರಡಿಸಿದೆ. ಆದರೆ, ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಬದುಕು ಅತಂತ್ರವಾಗಲಿದೆ. ಹಾಗಾಗಿ ರಸ್ತೆಗೆ ಭೂ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಈಗಾಗಲೇ ಮುತಗಾ ಗ್ರಾಪಂನಲ್ಲಿ ಫೆ.16ರಂದು ನಡೆದ ಸಾಮಾನ್ಯ ಸಭೆಯಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಭೂ ಸ್ವಾಧೀನ ಕೈಬಿಟ್ಟು ಪರ್ಯಾಯ ಮಾರ್ಗ ಕೈಗೊಳ್ಳಬೇಕು ಎಂಬುದರ ಕುರಿತು ಠರಾವು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಒಂದು ವೇಳೆ ಗ್ರಾಪಂ ಸದಸ್ಯರು, ರೈತರ ವಿರೋಧದ ನಡುವೆ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಿಂಗ್ ರೋಡ್‌ಗಾಗಿ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪಡಿಸುವುದು ಕೊಳ್ಳುವುದು ಅವಶ್ಯಕತೆ ಇಲ್ಲ. ಹಲವು ದಶಕಗಳಿಂದ ಈ ಜಮೀನನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ರೈತ ಕುಟುಂಬದ ಬೀದಿ ಪಾಲಾಗಲಿವೆ. ಹಾಗಾಗಿ ಸರ್ಕಾರವು ಕೂಡಲೇ ಭೂಮಿ ಸ್ವಾಧೀನ ಪ್ರಕ್ರಿಯೆ ಕೈಬಿಡಲು ಕ್ರಮ ವಹಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು.

ಗ್ರಾಪಂ ಅಧ್ಯಕ್ಷೆ ಮಂಗಲಾ ಖೊಂಪಿ, ಉಪಾಧ್ಯಕ್ಷ ಸುಧಾ ದೊಡ್ಡನ್ನವರ ಸೇರಿದಂತೆ ಸದಸ್ಯರು ಇದ್ದರು.